ಪುಟ:Chirasmarane-Niranjana.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟರಲ್ಲೇ ಅಪ್ಪುವಿನ ತಾಯಿ, ಗಂಡನಿಗಾಗಿಯೂ ಮಗುವಿಗಾಗಿಯೂ ಬುತ್ತಿ ತಂದಳು. "ಬಿಸಿಲಲ್ಲಿ ನೀನ್ಯಾಕಮ್ಮ ಹೊತ್ಕೊಂಡು ಬಂದೆ? ಕುಟ್ಟೀನ ಕಳಿಸಿದ್ರೆ ಆಗ್ತಿರ್ಲಿಲ್ವ?" ಎಂದು ಅಪು ತಾಯಿಯನ್ನು ಕುರಿತು ಕೇಳಿದ: ಆ ರೀತಿ ಬುತ್ತಿ ತರುವುದರಿಂದ ತನಗೆ ದೊರೆಯುವ ಸುಖ ಎಂಥದೆಂದು ಈ ಪೋರನಿಗೆ ಹೇಗೆ ತಿಳಿಯಬೇಕು?-ಎಂದು ಮನಸ್ಸಿನಲ್ಲೆ ಅಂದುಕೊಂಡು, ತಾಯಿ ನಕ್ಕಳು. ಆಕೆ ಚಿರುಕಂಡನತ್ತ ತಿರುಗಿ ಕೇಳಿದಳು: "ನೀಮ್ಮಮ್ಮ ಚೆನ್ನಾಗಿದ್ದಾಳೇನೋ?" ಚಿರುಕಂಡ, "ಹೂಂ" ಎಂದ. "ಮೂರು ಹೊತ್ತೂ ಮನೇಲೇ ಇರ್ತಾಳಲ್ಲ.. ನಮ್ಮಲ್ಲಿಗೆ ಒಂದು ಸಲ ಬಂದು ಹೋಗ್ಬಾರ್ದಾ?" ತನ್ನ ಸ್ನೇಹಿತನ ಅಮ್ಮನ ವಿಷಯದಲ್ಲಿ ತನ್ನ ತಾಯಿ ತೋರಿದ ಅದರವನ್ನು ಕಂಡು ಅಪ್ಪುವಿಗೆ ಸಮಾಧಾನವೆನಿಸಿತು. "ಹೇಳ್ತೀನೆ" ಎಂದ ಚಿರುಕಂಡ. ಹುಡುಗನ ಸ್ವರ ಕ್ಷೀಣವಾಗಿತ್ತೆಂದು ತಾಯಿ ಕೇಳಿದಳು: "ಯಾಕೆ ಸಪ್ಪಗಿದ್ದಿಯಾ?" "ಅವನು ಇರೋದೇ ಹಾಗೆ" ಎಂದ ಅಪ್ಪು, ಸ್ನೇಹಿತನ ಪರವಾಗಿ ಆತನ ಕಡೆ ನೋಡಿ ನಗುತ್ತ. ಹೋರಿಗಳನ್ನು ನೆರಳಿಗೊಯ್ದು ಕಟ್ಟಿ, ಮೆವು ಹಾಕಿ, ತಾನು ತೋಡಿಗೆ ಇಳಿದು ಕ್ಕೆ ಬಾಯಿ ತೊಳೆದು, ಅಪ್ಪುವಿನ ತಂದೆ ಬಂದ, ಹಲಸಿನ ಮರದ ಕೆಳಗೆ ನಿಂತಿದ್ದ ಮೂವರನ್ನೂ ಆತನೊಮ್ಮೆ ನೋಡಿದ ತಾಯಿ ಅಲ್ಲೇ ಬುತ್ತಿ ಬಿಚ್ಚುತ್ತ ಚಿರುಕಂಡನನ್ನೂ ಕರೆದಳು: "ಬಾರೋ, ಒಂದು ತುತ್ತು ಊಟಮಾಡು." "ನನಗ್ಬೇಡಿ" ಎಂದ ಚಿರುಕಂಡ, ತಲೆ ಬೀಸುತ್ತ. "ಸಾಕು ಬಡಿವಾರ,ಬಾ!"ಎಂದು ಅಪ್ಪುವಿನ ತಂದೆ ಅಧಿಕಾರದ ಧ್ವನಿಯಲ್ಲಿ ಹೇಳಿದ. "ನಾನೊಲ್ಲೆ, ಮನೆಯಿಂದ ಊಟ ಮಾಡ್ಕೊಂಡೇ ಬಂದೆ. ಈಗ್ತಾನೆ ಊಟವಾಯ್ತು." "ಹಾಗಾದರೆ ಬಿಡು" ಎಂದಳು ತಾಯಿ, ಮತ್ತೂ ಒತ್ತಾಯಿಸಬಯಸದೆ.