ಪುಟ:Chirasmarane-Niranjana.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮುನ್ನುಡಿ

ಒಬ್ಬ ಹುಡುಗ, ಹೆಸರು ಶಿವ(ರಾಯ). ಕುಳುಕುಂದ ಎಂಬ ಕುಗ್ರಾಮದಲ್ಲಿ ಹುಟ್ಟಿ, ಕಾಪು ಎ೦ಬ ಪುಟ್ಟ ಊರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಸುಳ್ಯದ ಹಯರ್ ಎಲಿಮೆ೦ಟರಿ ಶಾಲೆ ಸೇರಿದ-ಮು೦ದಿನ ಶಿಕ್ಷಣಕ್ಕಾಗಿ. ಅಲ್ಲಿ ಅಕ್ಷರಗಳೊಡನೆ ಆಟವಾಡುವ ಚಟ ಅ೦ಟಿತು. ಮೈಸೂರಿನಿ೦ದ ಹೊರಟು ಮಡಿಕೇರಿಯನ್ನು ದಾಟಿ ಮ೦ಗಳೂರಿಗೆ ಹೋಗುವ ಹೆದ್ದಾರಿ ಸುಳ್ಯವನ್ನು ಸೀಳುತ್ತಿತ್ತು. ಒಮ್ಮೆ ಗಾ೦ಧೀ(ಮಹಾತ್ಮ) ಆ ದಾರಿಯಾಗಿ ಬಂದರು. ಅಲ್ಲಿನ, ಆಸುಪಾಸಿನ, ಸಹಸ್ರಾರು ಜನರನ್ನು ಕಾಡಿತು 'ಗಾಂಧೀ ಹುಚ್ಚು'. ಕಿರಿಯ ಶಿವನೂ ಅದಕ್ಕೆ ಹೊರತಾಗಲಿಲ್ಲ. ಆ ತನಕ ಪುಸ್ತಕಗಳಿಗೇ ಅಂಟಿಕೊಂಡಿದ್ದವನು ಅತ್ತಿತ್ತ ನೋಡತೊಡಗಿದ. ಶಾಲೆಯ ಮುಖ್ಯೋಪಾಧ್ಯಾಯ ರಾಮಪ್ಪಯ್ಯನವರು ಸ್ವಾತ೦ತ್ರ್ಯ ಹೋರಾಟದಿ೦ದ ಪ್ರಭಾವಿತರಾದವರು; ಕನ್ನಡದ ಪುನರುದಯಕ್ಕೆ ಮಾರುಹೋದವರು. ವೆಂಕಪ್ಪಯ್ಯ (ಭಟ್) ಮಾಸ್ಟರು ಅಕ್ಷರಗಳಿಂದ ಆಕಾರ ಬಿಡಿಸಿದರು. ಬಿ. ಶಂಕರನಾರಾಯಣರಾಯರು ಆ ಆಕಾರಕ್ಕೆ ಉಸಿರು ತುಂಬಿದರು. ಮಹಾತ್ಮರ ಬಳಿಕ ಜವಾಹರರ ಆಗಮನ. ಗಾಂಧಿ-ನೆಹರೂ ಇಬ್ಬರೂ ಶಿವನಿಗೆ ಆತ್ಮೀಯರಾದರು. ರಾಜಕೀಯವೊ? ಸಾಹಿತ್ಯವೊ? ಹುಡುಗನಿಗೆ ಅವೆರಡೂ ಇಷ್ಟವಾದುವು. ಆ ವಾತಾವರಣದಲ್ಲಿ ದೇಶಪ್ರೇಮ ಸಾಹಿತ್ಯಪ್ರೇಮ ಬೇರೆಬೇರೆಯಾಗಿರಲಿಲ್ಲ. "ಭಾರತ್ ಮಾತಾಕಿ-ಜೆ!" ಎಂದ ಶಿವ 1937ರಲ್ಲಿ ತನ್ನ ಮೊದಲ ಕಥೆಯನ್ನೂ ಬರೆದ. 1938ರ ಬೇಸಗೆಯಲ್ಲಿ ಸುಳ್ಯ ಶಾಲೆಯ ಎಂಟನೆಯ ತರಗತಿಯ (ದೊಡ್ಡ) ಪರೀಕ್ಷೆಗೆ ಕುಳಿತ, ಆ ಹೊತ್ತಿಗಾಗಲೇ ಅವನು ಅಚ್ಚಾಗಿದ್ದ ಹತ್ತು ಹನ್ನೆರಡು ಕಥೆಗಳ ಕರ್ತೃ. ಪರೀಕ್ಷೆಯಲ್ಲಿ ಮೊದಲಿಗನಾದ. ತನ್ನ ರೆಕ್ಕೆ ಪುಕ್ಕ ಬಲಿಯಬೇಕು ಎಂಬ ಆಸೆ. ಅದಕ್ಕೆ ಓದಿನ ಹಾಲು ಬೇಕು. ಎಲ್ಲಿದೆ ಕಾಸು? "ಓದಿದು ಸಾಕು!" ಸುತ್ತುಮುತ್ತಲಿನವರ ಹಸು ಎಮ್ಮೆಗಳನ್ನು ಮೇಯಿಸಲು ಒಯ್ದ. ಒಳಗೆ ಕೊರಗು ಹೆಪುಗಟ್ಟಿತು. ಅದನ್ನು ಕರಗಿಸಿ ಆತ ಮತ್ತೆ ಮುಗುಳುನಗುವಂತೆ ಮಾಡಿದವರು ರಾಮಪ್ಪಯ್ಯ ಮಾಸ್ಟರು. ಅವರು ದಕ್ಷಿಣ ಕನ್ನಡದ ದಕ್ಶಿಣ ತುದಿಯಲ್ಲಿದ್ದ ನೀಲೇಶ್ವರದತ್ತ್ತ ಬೊಟ್ಟು ಮಾಡಿದರು. ಒಳ್ಳೆಯ ಹೈಸ್ಕೂಲು.... ಖರ್ಚು ಕಮ್ಮಿ. ಮೂರು ವರ್ಷಗಳ ವ್ಯಾಸಂಗಕ್ಕಾಗಿ ನೀಲೇಶ್ವರ ಸೇರಿದ ಹದಿಹರೆಯದ