೮೨ ಚಿರಸ್ಮರಣೆ
ತಿವಿದನೇ ಹೊರತು ಮಾತನಾಡಲಿಲ್ಲ.
ತಾಯಿಯೇ ಬೇಸರಗೊಂಡು ಹೇಳಿದಳು: "ಅದೆಷ್ಟು ಮಾತಾಡ್ತೀಯೋ, ಅದೇನು ಮಾತಾಡ್ತೀಯೋ--ಆ ಪರಮಾತ್ಮನೇ
ಬಲ್ಲ!"
...ಕೆಲವೇ ಹೆಜ್ಜೆಗಳಲ್ಲಿ ಅವರ ಗುಡಿಸಲು ಸಮೀಪಿಸಿತು. ಅಂಗಳದಲ್ಲೇ
ನಿಂತಿದ್ದ ಕಿರಿಯವನು ಕುಟ್ಟಿ--ಒಳಗಿದ್ದ ಅಜ್ಜಿಗೆ ತಿಳಿಸಲೆಂದು ಗಟ್ಟಿಯಾಗಿ ಕೂಗಿದ:
"ಅಮ್ಮ ಬಂದ್ಲು!ಅಪ್ಪ ಬಂದ!" "ಇವರೆಲ್ಲ ತ್ರಿಕರಪುರದಿಂದ ನಿನ್ನೇನೆ ಬಂದ್ಬಿಟ್ರು." 'ಅಜ್ಜಿ ಯಾವತ್ತು ಬಂದ್ರು?' ಎಂದು ಚಿರುಕಂಡನಿಂದ ಪ್ರಶ್ನೆ ಬರುವುದಕ್ಕೆ
ಮುಂಚಿತವಾಗಿಯೇ ಅಪ್ಪು ಹಾಗೆ ಹೇಳಿದ.
ತ್ರಿಕರಪುರದ ಪ್ರವಾಸ ಕಥನ ಕೇಳುವ. ಆತುರ ಅಪ್ಪುವಿಗೆ ಇರುತ್ತದೆಂದು
ಅಜ್ಜಿ ತಿಳಿದಿದ್ದಳು. ಹರಟೆ ಹೊಡೆಯಲು ಆಕೆಗೂ ಇನ್ನೊಂದು ಜೀವದ ಅವಶ್ಯಕತೆ ಇತ್ತು.ಆತ ಬೇಗನೆ ಮನೆಗೆ ಬಂದಾಗ ಅವಳಿಗೆ ಸಂತೋಷವಾಯಿತು.ಆದರೆ ಅಪ್ಪುವಿಗೆ ಹಾಗಲ್ಲ.ನಿನ್ನೆ ರಾತ್ರಿ, ಆ ರೀತಿ ಅಜ್ಜಿಯೊಡನೆ ಹರಟೆ ಹೊಡೆಯಬೇಕೆಂದು ಆತನಿಗೆ ಅನಿಸಿದ್ದರೂ ಈಗ ಬಿಡುವಿರಲಿಲ್ಲ. ಯಾವಾಗ ಚಿರುಕ೦ಡನೊಡನೆ ಮನೆ ಬಿಟ್ಟು ಹೊರಟೇನೋ, ಯಾವಾಗ,ಆತನೊಡನೆ ತಮ್ಮದೇ ಆದ ಮುಖ್ಯ ವಿಷಯಕ್ಕೆ ಸಂಬಂಧಿಸಿ ಮಾತನಾಡೇನೋ--ಎಂದು ಆತ ಚಡಪಡಿಸುತ್ತಿದ್ದ.
ಚಿರುಕಂಡ, ಅಪ್ಪುವಿನ ಅಜ್ಜಿಯನ್ನೂ ನೋಡಿದ, ಕುಟ್ಟಿಯನ್ನೂ ನೋಡಿದ.ಮೊದಲ ಬಾರಿಗೆ ಕಾಣುತ್ತಿರುವೆನೋ ಎಂಬಂತೆ ಆ ಮನೆಯನ್ನೂ ನೋಡಿದ.ತಾವೂ ರೈತರು, ಅಪ್ಪುವಿನ ಮನೆಯವರೂ ರೈತರು. ಆದರೆ ತಮ್ಮ ಹೋರಿಗಳು ಕೈಬಿಟ್ಟು ಹೋಗಿದ್ದುವು. ಇವರಿಗೊಂದು ಜತೆ ಹೋರಿಗಳಿದ್ದವು.ತಮ್ಮ ಹೊಲ ಜಮೀನುದಾರನ ವಶವಾಗಿತ್ತು. ಇವರಿಗೆ ತಮ್ಮದರಷ್ಟೇ, ಅಥವಾ
ತಮ್ಮದಕ್ಕಿ೦ತಲೂ ಸ್ವಲ್ಪ ದೊಡ್ಡದಾದ, ಸ್ವಂತದ ಹೊಲವಿತ್ತು-- ಇನ್ನೂ ಸ್ವಂತದ್ದಾಗಿಯೇ ಉಳಿದಿದ್ದ ಹೊಲ. ಈ ಮನೆಯೂ ಅಷ್ಟೆ.ತಮ್ಮದಕ್ಕಿಂತ ಸ್ವಲ್ಪ ವಾಸಿ. ಹಾಗೆ ನೋಡಿದರೆ,ಕಡುದರಿದ್ರರಾದ ಇತರ ಹಲವು ಜನ ರೈತರ ಬಡ ಹಟ್ಟಿಗಳಿಗಿಂತ ಈ ಗುಡಿಸಲುಗಳೇ ಮೇಲು. ಇವುಗಳಿಗಿಂತಲೂ ಸ್ವಲ್ಪ ಮೇಲುಮಟ್ಟದ ಮನೆಗಳು ಬೇರೆ ಇದ್ದುವು.ಅತ್ಯಂತ ಮೇಲುಮಟ್ಟದೆಂದ್ರೆ -- ಆ ಹಳ್ಳಿಯಲ್ಲಿದ್ದ ಇಬ್ಬರು ಬಲಾಢ್ಯ ಧನಾಢ್ಯ ಭೂಮಾಲಿಕರ ಮನೆಗಳು.