ಪುಟ:Chirasmarane-Niranjana.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಬಿಗಿಯಾಯಿತು. ದ್ವೇಷದಿಂದ, ತಿರಸ್ಕಾರದಿಂದ, ಕಟುವಾಗಿ ಉತ್ತರ ಕೊಡುವಂತೆ ಪ್ರೇರೆಪಸುತ್ತ, ಮೆದುಳು ತಪ್ತವಾಯಿತು. ಆದರೂ ಮಾಸ್ತರು ಶಾಂತಿ ಮಂತ್ರ ಜಪಿಸಿದರು, ಮೌನವಾಗಿ 'ಮೈಮರೆತು ಮೂರ್ಖನಾಗಬೇಡ' ಎಂದು ತನಗೆ ತಾನೇ ವಿವೇಕ ಹೇಳಿದರು.

   ಸುಮ್ಮನೆ ಕುಳಿತ ಮಾಸ್ತರನ್ನು ನಂಬಿಯಾರರ ದೃಷ್ಟಿ, ಪರೀಕ್ಷಿಸಿ ನೋಡಿತು. ತಮ್ಮ ಮಾತಿನ ಪ್ರಭಾವಕ್ಕೆ ಒಳಗಾಗಿ ಬೆದರಿದ ಮಗುವಿನಂತೆ ಮಾಸ್ತರು ಕಂಡರೇ ಹೊರತು ಬೇರೆ ಯಾವ ಸಂದೇಹವೂ ಅವರಲ್ಲಿ ಮೂಡಲಿಲ್ಲ. ತಾವು ಆಡಿದ ಮಾತುಗಳ ಬಗೆಗೆ ತಾವೇ ಹೆಮ್ಮೆಪಡುತ್ತ ಅವರು, ಕೊನೆಯ ಬಾರಿ ಸಿಗರೆಟಿನ ಉಸಿರೆಳೆದು ಹೊಗೆ ಬಿಟ್ಟರು. ಬಳಿಕ ಮುಗುಳು ನಕ್ಕು ಅವರೆಂದರು:
  "ನಿಮಗೊಂದು ರಹಸ್ಯ ಹೇಳ್ತೇನೆ. ನನ್ನ ಮಾವ ಇದ್ದಷ್ಟು ಕಾಲವೂ ಇಲ್ಲಿ ಶಾಲೆ ತೆರೆಯೋದನ್ನು ವಿರೋದಿಸಿದ್ರು. ಆಡುವವರ ಮಕ್ಕಳು ಆಡ್ಬೇಕು; ಬೇಡುವವರ ಮಕ್ಕಳು ಬೇಡ್ಬೇಕು ಅನ್ನೋದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಆದರೆ ಅವರ ತಲೆಮಾರು ಬೇರೆ, ನಮ್ಮ ತಲೆಮಾರು ಬೇರೆ. ನಾನು ಒಪ್ಪಿಲ್ಲ."
    ಮೆಚ್ಚುಗೆ ಸೂಚಿಸಿ ಉಸಿರಾಡಲು ಒಂದು ಅವಕಾಶ ದೊರೆಯಿತೆಂದು ಮಾಸ್ತರೆಂದರು:
    "ನಿಮ್ಮ ವಿಚಾರ ಸರೀಂತ ಯಾರು ಬೇಕಾದರೂ ಹೇಳಿಯಾರು."
    ನಂಬಿಯಾರರಿಗೆ ಆ ಪ್ರಶಂಸೆ ಕೇಳಿ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ ಗೋಪ್ಯವಾಗಿ ಮಾತನಾಡುವಂತೆ, ಸ್ವರ ತಗ್ಗಿಸಿ ಅವರೆಂದರು:
  "ಆ ನಂಬೂದಿರಿಗೂ ಶಾಲೆ ತೆರೆಯೋದು ಇಷ್ಟವಿರ್ಲಿಲ್ಲ. ನಾನು ಮತ್ತು ಆತ ಸ್ನೇಹಿತರಾದ್ರೂ-ನಿಮ್ಮಲ್ಲಿ ಹೇಳೋದಕ್ಕೇನಂತೆ?-ಅವನು ಮಹಾ ಅಭಿಪ್ರಾಯ. ನನಗೆ ಗೊತ್ತಿಲ್ಲವಾ ಅದೆಲ್ಲ? ಹಟ ತೊಟ್ಟು ಶಾಲೆ ತೆರೆಯೋಹಾಗೆ ಮಾಡ್ಡೆ. ಹೊರಗಿನಿಂದ ಅಧಿಕಾರಿಗಳು ದೊಡ್ಡವರು ಯಾರಾದರೂ ಬಂದಾಗ ಶಾಲೇನೆಲ್ಲ ನೋಡಿ, ಕೊಂಡಾಡೋದು ಯಾರನ್ನು ಹೇಳಿ?"
  ತುಟಿ ಪಿಟ್ಟೆನ್ನದಿದ್ದರೂ ನಂಬಿಯಾರರ ಮಾತನ್ನು ನಾನು ಕೇಳುತ್ತಿದ್ದೇನೆ ಎಂಬುದಕ್ಕೆ ಸೂಚನೆಯಾಗಿ ಮಾಸ್ತರು ತಲೆಯಾಡಿಸಿದರು. ಮೈಯೆಲ್ಲ ಬೆವೆತು ಬೇಯುತ್ತಿದ್ದಂತೆ ಕಂಡರೂ ಅವರು ಸ್ಧ್ಕೆರ್ಯದಿಂದ ಕುಳಿತರು.
  ಆದರೆ ಮಾಸ್ತರ ಇರುವಿಕೆಯನ್ನೇ ಅಣಕಿಸುವ ಹಾಗೆ ಇನ್ನೊದು ಮಾತು ಬಂತು: