ಪುಟ:Daaminii.pdf/೩೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ದ್ದೇನೆ; ಇನ್ನೆಂದಿಗೂ ನಿನ್ನನ್ನು ಬಿಟ್ಟಿರುವುದಿಲ್ಲ!” ಎಂದು ಹೇಳಿ,ಅಳತೊಡಗಿದನು.

ದಾಮಿನಿಯಾವ ಉತ್ತರವನ್ನೂ ಕೊಡಲಿಲ್ಲ. ರಮೇಶನು ನೆಲದ ಮೇಲೆ. ಬಿದ್ದು ಹೊರಳಾಡುತ್ತೆ, ಚೀತ್ಕಾರಮಾಡತ್ತೊಡಗಿದನು “ಈ ಬಾರಿ ಮಾತನಾಡು. ನಿನ್ನ ಆ ಮಾತುಕತೆಗಳನ್ನು ಎಷ್ಟೋ ದಿನಗಳಿಂದ ಕೇಳಲಿಲ್ಲ; ದಾಮಿನಿ! ಈ ಬಾರಿಯಾದರೂ ಮಾತನಾಡು!” ಎಂದು ಗೋಳಿಡತೊಡಗಿದನು. ಆಗಲೂ ಉತ್ತರ ವಿಲ್ಲ;-~ ಎಲ್ಲವೂ ನಿಶ್ಯಬ್ದ 1 ರಮೇಶನಿಗೆ ಸ್ವಲ್ಪ ಮಾತ್ರ ಏನೋ ಗೊತ್ತಾಯಿತು. ರುದ್ಧಶ್ವಾಸದಿಂದ ಹಳ್ಳಿಗೆ ಓಡಿ, ದೀಪವನ್ನುರಿಸಲು ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು, ದೀವಿಗೆಯನ್ನು ಹಚ್ಚಿದನು. ಬೆಳಕಿನಲ್ಲಿ ನೋಡಿದನು; ಅಲ್ಲಿಯೆ ಇನ್ಯಾರೋ ವೃದ್ಧೆಯೊಬ್ಬಳು ಕುಳಿತುಕೊಂಡು, ದಾಮಿನಿಯ ಮುಖವನ್ನು ನಟ್ಟ ದೃಷ್ಟಿಯಿಂದ ನೋಡುತ್ತಿದ್ದಳು. ದಾಮಿನಿಯು ಈ ಜನ್ಮದಲ್ಲಿ ಕಣ್ಣು ಮುಚ್ಛಿದ್ದಳು.

ರಮೇಶನನ್ನು ನೋಡಿ, ವೃದ್ದೆಯು ನಕ್ಕಳು. ಭಯಂಕರವಾದ ಆ ನಗೆಯನ್ನು ನೋಡಿ, ರಮೇಶನ ಮೆಯ್ಯು ರೋಮಂಚಿತವಾಯ್ತು! ವೃದ್ದೆಯು ಎದ್ದಳು. ಎದ್ದು ನಿಂದು, ರಮೆಶನ ಮುಖವನ್ನು ಏಕದೃಷ್ಟಿಯಿಂದ ನೋಡತೊಡಗಿದಳು, ರಮೇಶನು ಗುರುತಿಸಿದನು;– ಅವಳೇ ಆ ಪೂರ್ವಪರಿಚಿತೆಯಾದ ಉನ್ಮಾದಿನಿ!

ಉನ್ಮಾದಿನಿಯು ಒಂದು ಬಾರಿ ತುಟಿಯ ಮೇಲೆ ಬೆರಳನ್ನಿಟ್ಟು,- “ಸುಮ್ಮನಿರು! ಶಬ್ದ ಮಾಡಬೇಡ. ನನ್ನ ದಾಮಿನಿಯು ನಿದ್ದೆ ಮಾಡುತ್ತಿದ್ದಾಳೆ;-ನಿದ್ದೆ ಮಾಡುತಿದ್ದಾಳೆ!” – ಎಂದಳು, ಒಡನೆಯೆ, ಮತ್ತೊಂದು ಬಾರಿ ವಿಕಟವಾದ ನಗುವನ್ನು ನಕ್ಕು, ರಮೇಶನ ಮೇಲೆ ಬಿದ್ದು, ಅವನ ಕೊರಲನ್ನು ವಜ್ರಾಯುಧದಂತೆ ಗಟ್ಟಿಯಾಗಿ ಒತ್ತಿ ಹಿಡಿದು – “ಗೊತ್ತಾಯಿತು. ನೀನೇ ರಮೇಶನು. ನಿನ್ನ ದೆಸೆಯಿಂದ ಲೇ ನನ್ನ ದಾಮಿನಿಯು ಮರಣಪಟ್ಟುದು!” - ಎಂದಳು. ರಮೇಶನಿಗೆ ಶ್ವಾಸರೋಧವಾಯ್ತು; ಕಣ್ಣ ನರಗಳೆಲ್ಲವೂ ಮೇಲಕ್ಕೆ ಉಬ್ಬಿದುವು. ಅವನಿಗೆ ಮಾತಿಲ್ಲ; ಶಕ್ತಿಯಿಲ್ಲ. ಕೊನೆಗೆ ಅವಸನ್ನನಾಗಿ ದಾಮಿನಿಯ ಬಳಿಯಲ್ಲಿಯೆ ಬಿದ್ದುಬಿಟ್ಟನು, ಹುಚ್ಚಿಯು ಮತ್ತೊಮ್ಮೆ ರಮೇಶನ ಕತ್ತನ್ನು ಒತ್ತಿ ಹಿಡಿದಳು. ಈ ಬಾರಿಗೆ ಎಲ್ಲವೂ ಮುಗಿಯಿತು!