ಪುಟ:Duurada Nakshhatra.pdf/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ರಂಗರಾಯರನ್ನು ಬೀಳ್ಕೊಡುವುದಕ್ಕೋಸ್ಕರ ಊರಿನವರು ಸತ್ಕಾರಕೂಟ ಏರ್ಪಡಿಸಬಹುದೆಂದು ಜಯದೇವ ನಿರೀಕ್ಷಿಸಿದ್ದು ಸುಳ್ಳಾಯಿತು. ಯಾರಾದರೂ ಆ ಮಾತನ್ನೆತ್ತಿದರೆ ನಿರಾಕರಿಸಬೇಕೆಂದು ರಂಗರಾಯರೇನೋ ತೀರ್ಮಾನಿಸಿದ್ದರು. ಆದರೆ ಆ ಮಾತು ಬರಲೇ ಇಲ್ಲ.

ವೆಂಕಟರಾಯರು ಆಗಮಿಸಿದ ಆಜ್ಞಾಪತ್ರ ಬಂದೊಡನೆ ರಂಗರಾಯರು ಅಧಿಕಾರ ವಹಿಸಿಕೊಟ್ಟರು. ಎಲ್ಲ ತರಗತಿಗಳಿಗೂ ಹೋಗಿ, ತಾನು ಹೊರಡುವೆನೆಂದು ಹೇಳಿ ಬಂದರು. ಆಫೀಸು ಕೊಠಡಿಗೆ ಬಂದು ಐದು ನಿಮಿಷ ಮೌನವಾಗಿ ಅಲ್ಲಿಯೆ ಕುಳಿತರು. ಕೊರಳಿನ ನರಗಳು ಊದಿಕೊಂಡಿದುವು. ಮುಖ ಕೆಂಪುಕೆಂಪಾಗಿತ್ತು' ಮಧಾಹ್ನದ ವಿರಾಮ ಕಳೆದು ವೆಂಕಟರಾಯರೂ ನಂಜುಂಡಯ್ಯನೂ ತರಗತಿಗಳಿಗೆ ಹೊರಟೊಡನೆ ರಂಗರಾಯರೆದ್ದರು.

“ಮನೆಗೆ ಹೊರಡ್ತೀರಾ ಸಾರ್ ?” ಎಂದು ಕೇಳಿದ ಜಯದೇವ.

ಅವರು ಹೌದೆಂದು ತಲೆಯಾಡಿಸಿದರು.

“ಊಟಮಾಡ್ಕೊಂಡು ವಾಪ್ಸು ಬರ್ತೀರಾ?”

“ಯಾಕ್ಬರ್ಲಿ ಇನ್ನು?" -

ರಂಗರಾಯರ ಹೃದಯದೊಳಗಾಗುತ್ತಿದ್ದ ಸಂಕಟವನ್ನು ಕಂಡು ಜಯದೇವನಿಗೆ ಕೆಡುಕೆನ್ನಿಸಿತು.

“ಸಾಯಂಕಾಲ ಮನೇಲೆ ಇರ್ತಿರಾ ಸಾರ್ ?

ಇರ್ತೀನಿ ಜಯದೇವ್. ಯಾಕೆ? ಮನೆಗ್ಬರ್ತೀರೇನು? ಶಿಕ್ಷೆ, ಅಂತ ನನ್ನ ವರ್ಗಾಯಿಸಿದಾರೆ. ನೀವಿನ್ನು ನನ್ಜತೇಲಿ ಮಾತಾಡೋದು ಚೆನಾಗಿರುತ್ತೋ ಇಲ್ಲವೊ–”

ಆ ಮಾತಿನಲ್ಲಿ ಸತ್ಯಾಂಶವಿತ್ತು, ಆದರೆ ಅದು, ಜಯದೇವ ಸ್ವೀಕರಿಸಲು ಸಿದ್ಧನಿದ್ದ ಆಹ್ವಾನ.. ಎದ್ದು ನಿಂತು ಅವನೆಂದ:

“ಪರವಾಗಿಲ್ಲ ಸಾರ್.. ನನಗೆ ಯಾರ ಹೆದರಿಕೇನೂ ಇಲ್ಲ-ಹಂಗೂ ಇಲ್ಲ."