ಪುಟ:Duurada Nakshhatra.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯರಿಗೆ ಅಸಮಾಧಾನವಾಯಿತು. ಬರುತಿದ್ದಾಗ ಅವರು ಮನೆ ಮಾಡುವ ತನಕ ಶಾಲೆಯಲ್ಲೆ ಉಳಿದುಕೊಂದರಾಯಿತೆಂದು ಯೋಚಿಸಿದ್ದರೇನೋ ನಿಜ. ಆದರೆ ಜಯದೇವನೂ ಶಾಲೆಯಲ್ಲೇ ಇರುವುದನ್ನೂ ತಿಳಿದಾಗ ಅವರು ತಮ್ಮ ಅಭಿಪ್ರಾಯ ಬದಲಾಯಿಸಿದರು. ಉಪಾಧ್ಯಾಯರು ಶಾಲೆಯಲ್ಲಿ ವಸತಿ ಮಾಡುವುದರ ಔಚಿತ್ಯ-ಅನೌಚಿತ್ಯಗಳ ಪ್ರಶ್ನೆ ಒಡನೆಯೇ ಅವರನ್ನು ಭಾಧಿಸತೊಡಗಿತು. ಆ ಪ್ರಶ್ನೆಗೆ ಉತ್ತರ ಕೊಡುವುದನ್ನೂ ಅವರು ತಡಮಾಡಲಿಲ್ಲ.

"ಉಪಾಧ್ಯಾಯರು ಶಾಲೆಯಲ್ಲೇ ಮಲಕೊಳ್ಳೋದು ಚೆನ್ನಾಗಿರೋದಿಲ್ಲ ಮಿ.ಜಯದೇವ್. ನೀವು ಬೇಗ್ನೆ ಬೇರೆ ಮನೆ ಮಾಡ್ಬೇಕು."

"ಹೌದು, ಹುಡುಕ್ತಾ ಇದೀನಿ."

ಅದು ನಿಜವಾಗಿರಲಿಲ್ಲ. ಆದರೆ ವೆಂಕಟರಾಯರೆದುರು ಅಂಥದೊಂದು ಪುಟ್ಟ ಸುಳ್ಳು ಹೇಳುವುದು ತಪ್ಪಲ್ಲವೆಂದು ಜಯದೇವನಿಗೆ ತೋರಿತು.

ಆ ಮಾತಿನ ಫಲವಾಗಿ ವೆಂಕಟರಾಯರ ವಸತಿಯ ಪ್ರಶ್ನೆಯೂ ಪ್ರಧಾನವಾಗಿರಲಿಲ್ಲ.

ಆಗ ನಂಜುಂಡಯ್ಯನೆಂದರು:

"ನಮ್ಮ ಪಂಚಾಯತ ಬೋರ್ಡು ಅಧ್ಯಕ್ಷರು ಶಂಕರಪ್ಪ ಅಂತ. ನೀವು ಕೇಳಿರ್ಬೇಕು."

"ಕೇಳ್ದೆ ಉಂಟೆ? ಬೆಂಗಳೂರಲ್ಲೇ ಅವರ ವಿಷಯ ತಿಳೀತು."

"ನೀವು ಮನೆಮಾಡೋವರೆಗೂ ತಮ್ಮಲ್ಲೇ ಇರ್ಬೇಕೂಂತ ಶಂಕರಪ್ಪ ಆಗಲೇ ಹೇಳಿದಾರೆ. ಅಲ್ಲಿ ಬೇಕಾದಷ್ಟು ಖಾಲಿ ಕೊಠಡಿಗಳಿವೆ. ಪಕ್ಕದಲ್ಲೇ ಒಂದು ಬ್ರಾಹ್ಮಣರ ಮನೆ ಇದೆ. ಅಲ್ಲಿ ಊಟಕ್ಕೆ ಏರ್ಪಾಡು ಮಾಡ್ತಾರೆ."

"ಆಗಲಿ ಆಗಲಿ, ಹಾಗೇ ಆಗಲಿ. ಆದರೆ ಈ ತಿಂಗಳಲ್ಲೇ ಮನೆ ಮಾಡ್ಬೇಕೂಂತಿದೀನಿ."

"ಅದಕ್ಕೇನಂತೆ? ಹಾಗೇ ಮಾಡಿ"

"ರಂಗರಾಯರು ಇರೋ ಮನೆ ಹೇಗಿದೆ?"

"ಚೆನ್ನಾಗಿದೆ. ಸ್ವಲ್ಪ ರಿಪೇರಿ ಮಾಡಿಸ್ಬೇಕೋ ಏನೋ."

"ಎಷ್ಟೋ ಬಾಡಿಗೆ?"

"ಆರು ರೂಪಾಯಿಯೊ ಏಳು ರೂಪಾಯಿಯೊ ಇರಬೇಕು. ಆದರ ಮಾಲೀಕರಿಗೆ ತಿಳಿಸೋಣ್ವೇನು?"