ಪುಟ:Duurada Nakshhatra.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಅವಸರವೇನು? ಒಂದು ತಿಂಗಳಾದ್ಮೇಲೆ ಹೇಳಿದರಾಯ್ತು, ಅಲ್ಲದೆ, ಆ ರಂಗರಾವ್'ಗೆ ನಾನು ಆ ಮನೆಗೆ ಬರ್ತೀನೀಂತ ಗೊತಾಗ್ದೆ ಇರೋದೇ ಮೇಲು.”

“ಗೊತಾದ್ರೂ, ಏನು ಮಹಾ?”

“ಹಾಗಲ್ಲ-ಹಾಗಲ್ಲ.”

“ಯಾವತ್ತು ಹೊರಡುತ್ತೊ ಆಸಾಮಿ.. ನಿಮಗೇನಾದ್ರೂ ಹೇಳಿದ್ರೇ ಜಯದೇವ್?”

“ಇಲ್ವಲ್ಲಾ ನಿಮಗೆ ಹೇಳಿರ್ತಾರೇಂತಿದ್ದೆ.”

ಹೇಗೆ ಹೊರಟುಬಿಟ್ಟಿತ್ತು ಆ ಧೋರಣೆಯ ಮಾತು! ಸಂಜೆ ರಂಗರಾಯರ ಮನೆಗೆ ಬರುವೆನೆಂದಿದ್ದ ಜಯದೇವ, ಆದರೆ ಆ ವಿಷಯವನ್ನು ಇವರಿಬ್ಬರ ಮುಂದೆ ಹೇಳುವುದು ಸಾಧ್ಯವಿತ್ತೆ?

ಆನಂದವಿಲಾಸ ಆ ಮಾತುಗಳಿಗೆಲ್ಲ ಅಲ್ಪವಿರಾಮ ಹಾಕಿತು. ವೆಂಕಟರಾಯರ ಮಾತಿನ ಠೀವಿ, ಹಾವಭಾವ, ಗಟ್ಟಿ ಸ್ವರ ಅಲ್ಲಿದ್ದ ಎಲ್ಲರ ಗಮನವನ್ನೂ ಸೆಳೆಯದಿರಲಿಲ್ಲ, ಇವರು ಹೊಸ ಮುಯ್ಯೋಪಾಧಾಯರು ಎಂದು ಮೊದಲೇ ನಂಜುಂಡಯ್ಯ ಘೋಷಿಸುತ್ತ ಬರದಿದ್ದರೂ ರಂಗರಾಯರಿಗೆ ವರ್ಗವಾಯಿತೆಂಬ ವಿಷಯವನ್ನು ಬಾರಿಬಾರಿಗೂ ಹೇಳುತ್ತ ಬಂದರು.

ಕಾಫಿ ಕುಡಿದು ಹೊರಬೀಳುತ್ತಿದ್ದಾಗ ವೆಂಕಟರಾಯರೆಂದರು:

“ರಂಗರಾವ್ ಇನ್ನೂ ಒಂದೆರಡು ದಿನ ಇಲ್ಲಿ ನಿಂತರೂ ನಿಲ್ಲಬಹುದು. ಹಾಗೇನಾದರೂ ಆತ ಮಾಡಿದ್ರೆ ನಾನು ವರದಿ ಮಾಡ್ಬೇಕಾಗುತ್ತೆ, ಅಲ್ದೆ ಆತ ಇಲ್ಲಿಂದ ಹೊರಡೋಕ್ಮುಂಚೆ ಯಾರು ಯಾರನ್ನು ನೋಡ್ತಾನೆ ಏನೇನು ಮಾಡ್ತಾನೇಂತ ಸ್ವಲ್ಪ ತಿಳಕೋಬೇಕಲ್ಲ.”

“ಅದೇನು ದೊಡ್ಡ ಕೆಲಸ? ನನ್ನ ತಮ್ಮ ವಿರೂಪಾಕ್ಷನಿಗೆ ಹೇಳಿದ್ರೆ, ರಂಗರಾವ್ ಈ ಊರು ಬಿಡೋವರೆಗೂ ಆತನ ಹಿಂದೇನೇ ಇರ್ತಾನೆ.”

ಯಾವ ಯೋಚನೆಯೂ ಇಲ್ಲದೆ ಹೇಗೆ ಹೇಳಿದರು ನಂಜುಂಡಯ್ಯ ! ಮುಗ್ದ ಮನಸಿನ ವಿರೂಪಾಕ್ಷ ಇನ್ನು ವಿದ್ಯಾಗುರುವನ್ನೆ ಹಿಂಬಾಲಿಸುವ ಗೂಢಚಾರನಾಗಬೇಕು! ಆ ರೀತಿ ಕಲುಷಿತವಾಗಿಯೆ ಬೆಳೆಯುವ ಆ ಬಳ್ಳಿ , ಹೆಮ್ಮರವಾದಾಗ ಹೇಗಿರಬೇಡ!