ಪುಟ:Duurada Nakshhatra.pdf/೧೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಯಾರು ಎಂದು ಕೇಳಬೇಕಾದ ಅಗತ್ಯವಿರಲಿಲ್ಲ, ಜಯದೇವ ಹೊರ ಬರುತ್ತಲೆ ಬಂದವನೆಂದ:

“ಮೇಷ್ಟ್ರು ಕಳಿಸವ್ರೆ.”

ಆಫೀಸು ಕೊಠಡಿಯನ್ನು ತೆರೆದು ವೆಂಕಟರಾಯರ ಸಾಮಾನುಗಳನ್ನು ಹೊರತಂದು ಅಷ್ಟನ್ನು ಆಳು ತಲೆಯ ಮೇಲಿರಿಸಿಕೊಳ್ಳಲು ಜಯದೇವ ನೆರವಾದ.

ಆ ಬಳಿಕ ಕೆಲವು ನಿಮಿಷಗಳಾದ ಮೇಲೆ ತನ್ನ ಹಾಸಿಗೆಯನ್ನು ಹಾಸಿಟ್ಟು, ದೀಪವನ್ನು ಚಿಕ್ಕದಾಗಿ ಉರಿಯಗೊಟ್ಟು, ಬಾಗಿಲಿಗೆ ಬೀಗ ತಗಲಿಸಿ ಜಯದೇವ ಬೇಗ ಬೇಗನೆ ರಂಗರಾಯರ ಮನೆಗೆ ನಡೆದ.

Χ X X

ರಾತ್ರೆ ಅಷ್ಟು ಹೊತ್ತಾದಾಗ, ಇನ್ನು ಜಯದೇವ ಬರುವುದಿಲ್ಲವೆಂದೇ ರಂಗರಾಯರು ಭಾವಿಸಿದ್ದರು.

“ಬರ್ತಾನೇಂತ ಅಡುಗೆ ಮಾಡಿದ್ದು ವ್ಯರ್ಥವಾಯ್ತು” ಎಂದು ಸಾವಿತ್ರಮ್ಮ ಗೊಣಗಿದರು.

ಆ ನಷ್ಟದ ಯೋಚನೆಗಿಂತಲೂ ತಮ್ಮನ್ನು ಕಾಣಲು ಜಯದೇವ ಹಿಂದೇಟು ಹಾಕುತ್ತಿರಬಹುದೆಂಬ ವಿಚಾರ ರಂಗರಾಯರನ್ನು ಸಂಕಟಕ್ಕೆ ಗುರಿಮಾಡಿತು.

ಆದರೆ ಅಂಗಳದಲ್ಲಿ ನಿಂತು ಜಯದೇವ “ಸಾರ್” ಎಂದಾಗ, ರಂಗರಾಯರು ಉತ್ಸಾಹದಿಂದೆದ್ದು ಬಾಗಿಲು ತೆರೆದರು.

“ಬನ್ನಿ ಜಯದೇವ, ನೀವು ಬರೋದೇ ಇಲ್ವೇನೋಂತಿದ್ದೆ.”

“ಯಾಕ್ಸಾರ್ ? ಬರ್ತೀನೀಂತ ಆಗ್ಲೇ ಹೇಳ್ಲಿಲ್ವೆ? ಅವರಿಬ್ಬರನ್ನೂ ಕಳಿಸ್ಕೊಡೋದು ತಡವಾಯ್ತು”

ಮನೆಯ ಗೋಡೆಯಿಂದ ಪಟಗಳು ಮಾಯವಾಗಿದ್ದುವು; ಕಿತ್ತು ಬಂದಿದ್ದುವು ಮೊಳೆಗಳು....

“ಇದೇನ್ಸಾರ್ ? ಯಾವತ್ತು ಹೊರಡ್ತೀರಾ?”

“ನಾಳೆ ಬೆಳಗ್ಗೆ ಜಯದೇವ.”

"ನಾಳೇನೆ! ”