ಪುಟ:Duurada Nakshhatra.pdf/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


“ಹೌದು; ಎಂಟು ಗಂಟೆಗೆ ಚೆಂದೂರು ಬಸ್ಸು ಬರುತ್ತೆ.”

“ಕೊಡಗನೂರಿಗೇ ನೇರವಾಗಿ ಹೋಗ್ತೀರಾ ?”

“ಇಲ್ಲವಪ್ಪ ಮನೆಯಾಕೇನ ಬೆಂಗಳೂರಲ್ಲಿ ಮಗಳ್ಮನೇಲಿ ಬಿಟ್ಬಿಟ್ಟು ನಾನೊಬ್ಬನೇ ಕೊಡಗನೂರಿಗೆ ಹೊರಡ್ತೀನಿ.. ಹೊಸ ಊರು ಸೇರೋದಕ್ಕೆ ಇನ್ನೂ ಒಂದುವಾರ ಅವಕಾಶವಿದೆಯಲ್ಲ.”

ಮೌನ ಸ್ವಲ್ಪ ಹೊತ್ತು ನೆಲೆಸಿತು.

“ನಿಮ್ಮ ಮನಸ್ಸಿಗೆ ತುಂಬಾ ಬೇಜಾರು ಆಗಿರ್ಬೇಕಲ್ವೆ ಸಾರ್?”

“ಯಾಕೆ ಜಯದೇವ ? ಹಿಂದೇನೂ ಎರಡು ಮೂರು ಸಲ ಉಗುಳು ನುಂಗಿದೇನೆ. ಈ ವಯಸ್ನಲ್ಲಿ ಈಗ ಹೀಗಾಗ್ಬಾರ್ದಾಗಿತ್ತು-ಅಷ್ಟೆ...ಇನ್ನೂ ಒಂದೂಂತಂದ್ರೆ, ಪ್ರತಿ ಸಾರೆಯೂ ನನಗೇ ಅನ್ಯಾಯ ಆಗ್ತಾ ಬಂದಿದೆ.”

“ನ್ಯಾಯ ಅನ್ನೋ ಪದಕ್ಕೆ ಈಗ ಅರ್ಥವುಂಟೆ ಸಾರ್?”

ರಂಗರಾಯರು ನಗಲೆತ್ನಿಸಿದರು. ನ್ಯಾಯದ ಪದ ಹೊಸ ವಿಚಾರಕ್ಕೆ ಆಸ್ಪದ ಕೊಟ್ಟಂತಾಗಿ ಜಯದೇವನೆಂದ:

“ನೀವು ಸುಮ್ನಿರೋದು ಸರಿಯಲ್ಲ ಸಾರ್. ಪ್ರತಿಭಟಿಸ್ಬೇಕು. ಊರಲ್ಲಿ ಒಳ್ಳೆಯವರು ಖಂಡಿತ ಇರ್ತಾರೆ, ವಿದ್ಯಾರ್ಥಿಗಳಿರ್ತಾರೆ.”

ರಂಗರಾಯರು ಬಹಳ ಹೊತ್ತು ಉತ್ತರವೀಯಲಿಲ್ಲ. ಅವರ ಹುಬ್ಬುಗಳು ಯೋಚನೆಯ ಭಾರದಿಂದ ಬಾಗಿದುವು.. ಮತ್ತೆ ಅವರು ಉತ್ತರವಿತ್ತಾಗ ಆ ಮಾತಿನಲ್ಲಿ ಕೊನೆಯ ತೀರ್ಮಾನದ ಧ್ವನಿ ಇತ್ತು.

“ಇಲ್ಲ.ಜಯದೇವ್.. ಅದು ಅಷ್ಟು ಸುಲಭವಲ್ಲ, ಇಲ್ಲಿ ವಾತಾವರಣ ಕೆಟ್ಟು ಹೋಗಿದೆ. ತತ್ವಕ್ಕಾಗಿ ಹೊಡೆದಾಡೋ ಸಾಮರ್ಥ್ಯವೂ ಈಗ ನನಗಿಲ್ಲ, ಇದ್ದುಕೊಳ್ಳಲಿ ಬಿಡಿ. ನಾನು ಹೊರಟು ಹೋಗೋದ್ರಿಂದ ಕೆಲವರಿಗಾದರೂ ಸುಖವಾಗೋದಿದ್ರೆ--"

“ಅದೇನು ಸುಖವೋ....”

ವೆಂಕಟರಾಯರು ಜಯದೇವನ ದೃಷ್ಟಿಯ ಮುಂದೆ ಸುಳಿದರು.ಅವರ ಆಡಳಿತದಲ್ಲಿ ಶಾಲೆಯ–ವಿದ್ಯಾರ್ಥಿಗಳ—ಅಭಿವೃದ್ಧಿಯಾಗುವ ಚಿತ್ರವನ್ನು ಕಲ್ಪಿಸಿಕೊಳ್ಳಲು ಆತ ಯತ್ನಿಸಿದ. ಆ ಚಿತ್ರ ಸ್ಪಷ್ಟವಾಗಿ ಮೂಡಲೇ ಇಲ್ಲ. ಅದು ಮಸಕು ಮಸಕಾಗಿತ್ತು....