ಪುಟ:Duurada Nakshhatra.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಸಂಜೆ ವೆಂಕಟರಾಯರು ಮತ್ತು ನಂಜುಂಡಯ್ಯ! ಆಡಿಕೊಂಡಿದ್ದ ಮಾತುಗಳೆಲ್ಲ ಜಯದೇವನ ನೆನಪಿಗೆ ಬಂದುವು. ಅಷ್ಟನ್ನೂ ರಂಗರಾಯರಿಗೆ ಹೇಳಿ ಬಿಡೋಣವೇ–ಎನ್ನಿಸಿತು. ಅದರಿಂದೇನೂ ಪ್ರಯೋಜನವಿಲ್ಲ-ಆಗಿರುವ ನೋವನ್ನು ಮತ್ತೂ ಯಾಕೆ ಕೆದಕಬೇಕು-ಎಂದು ಅತ ಸುಮ್ಮನಾದ.

ಸಾವಿತ್ರಮ್ಮ ಬಂದು ಹೇಳಿದರು :

“ಎಷ್ಟೋ ದಿವಸ ಆದ್ಮೇಲೆ ಬಂದಿದೀರಪ್ಪ ಏಳಿ, ಊಟಕ್ಕೇಳಿ. ಆ ಮೇಲೆ ಮಾತಾಡೀರಂತೆ.” .

ಊಟವಾಯಿತೆಂದು ಸುಳ್ಳಾಡಲು ಬಯಸಿದರೂ ಅದು ಸಾಧ್ಯವಾಗದೆ ಜಯದೇವನೆಂದ:

“ನಂಗೆ ಹಸಿವಿಲ್ಲ ಅಮ್ಮ”

“ಯಾರಾದರೂ ನಗ್ತಾರೆ, ನಿಮ್ಮ ವಯಸ್ನಲ್ಲಿ ಹಾಗಂದ್ರೆ.... ಏಳಿ--ಏಳಿ.... ”

ರಂಗರಾಯರೂ ಹೆಂಡತಿಯ ಮಾತನ್ನ ಹಿತವಚನದೊಡನೆ ಪುಷ್ಟೀಕರಿಸಿದರು:

“ಊಟ ತಿಂಡಿ ಯಾವಾಗಲೂ ಕ್ರಮಬದ್ಧವಾಗಿರ್ಬೇಕು ಜಯದೇವ. ಕಾಹಿಲೆ ಬೀಳ್ಬೇಡೀಪ್ಪಾ"

ಊಟವಾಯಿತು......

ಅನಂತರದ ವಿರಾಮದಲ್ಲಿ ರಂಗರಾಯರೆಂದರು.

“ಉಪಾಧ್ಯಾಯ ವೃತ್ತಿ ಅತ್ಯಂತ ಗೌರವದ್ದು, ಆದರೆ ಇನ್ನೊಮ್ಮೆ ಯುವಕನಾಗಿ ಜೀವನ ಷುರು ಮಾಡೋಕೆ ನನಗೆ ಅವಕಾಶ ಸಿಗ್ತೂಂದ್ರೆ ಖಂಡಿತವಾಗ್ಲೂ ನಾನು ಉಪಾಧ್ಯಾಯನಾಗೋದಿಲ್ಲ.”

ಜಯದೇವನಿಗೆ ಹೃದಯ ಹಿಂಡಿದ ಹಾಗಾಯಿತು:

“ನೀವು ಹಾಗನ್ಬಾರದು. ಈ ರೀತಿ ನೀವಂದ್ರೆ ನನ್ನಂಥ ಯುವಕರು ಯಾಕೆ ವೃತ್ತಿಗೆ ಬಂದಾರು?"

“ಬರದೆ ಏನ್ಮಾಡ್ತಾರೆ? ಯಾವ ಉದ್ಯೋಗವೂ ಸಿಗ್ದೇ ಇದ್ದಾಗ ಈ ಉದ್ಯೋಗಕ್ಕೆ ಬರ್ತಾರೆ. ದೊಡ್ಡ ಆದರ್ಶ ಇಟ್ಕೊಂಡು ಬರೋ ಜನರೂ ಕೆಲವರು ಇರ್ಬಹುದು. ಇಲ್ಲಾಂತ ನಾನು ಅನ್ನೋದಿಲ್ಲ, ಆದರೆ ಅವರೆಲ್ಲ ಯಾವ ಭ್ರಮೇನೂ ಇಟ್ಕೊಳ್ಳದೇನೇ ಬರೋದು ಮೇಲು."