ಪುಟ:Duurada Nakshhatra.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಯದೇವನೊ – ಭ್ರಮೆ ಇಟ್ಟಕೊಂಡೇ ಬಂದಿದ್ದ, ವಿದ್ಯಾ ಸರಸ್ವತಿಯ ಮಂದಿರಕ್ಕೆ ಬಂದಿದ್ದು, ಅನನ್ಯ ಭಕ್ತಿಯಿಂದ.. ಆದರೆ ಬಾಗಿಲು ಎಂದು ಭಾವಿಸಿ ಒಳ ನುಗ್ಗಿದಲ್ಲೇ ಬಂಡೆಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು....

“ಹಾಗಾದ್ರೆ ಇದಕ್ಕೆ ಪರಿಹಾರ ಇಲ್ವೆ ಸಾರ್?”

“ಇದ್ದೀತು ಜಯದೇವ, ಆದರೆ ನನಗಂತೂ ತಿಳೀದು.”

... ಹಾಗೆ ಮಾತು ಮುಂದುವರಿಯಿತು.

ಸಾಮಾನು ಕಟ್ಟಲು ಜಯದೇವ ನೆರವಾದ. ಆ ಮನೆಯಲ್ಲಿ ಎಷ್ಟೊಂದು ಕಡಮೆ ಸಾಮಾನುಗಳಿದ್ದುವು!

ಸಾವಿತ್ರಮ್ಮ ನಗುತ್ತ ಅಂದರು:

“ಏನಪ್ಪಾ, ನೀವು ಮದ್ವೆ ಮಾಡ್ಕೊಂಡು ಸಂಸಾರ ಹೂಡುವಾಗ ಎಷ್ಟು ಕಮ್ಮಿ ಸಾಧ್ಯವೋ ಅಷ್ಟು ಕಮ್ಮಿ ಸಾಮಾನು ಇಟ್ಕೊಳ್ಳಿ. ಆಜ್ಞೆ ಬಂದ ತಕ್ಷಣ ಹೊರಡೋ ಹಾಗಿರ್ಬೇಕು!”

.ನಡುರಾತ್ರೆಯಾಗಿತ್ತು ಜಯದೇವ ಶಾಲೆಯತ್ತ ಹೊರಟಾಗ.

ಬೀದಿಯಲ್ಲಿ ನಿಂತು ರಂಗರಾಯೆರೆಂದರು.

“ನಿಮ್ಮಿಂದ ತುಂಬಾ ಉಪಕಾರವಾಯ್ತು ಜಯದೇವ, ನೀವು ಇನ್ನೊಂದು ಮಾದಬೇಕಾದ್ದು ಮಿಕ್ಕಿದೆ."

“ಏನು ಹೇಳಿ"

“ನನ್ನದೊಂದು ಮಾತು ನಡೆಸಿಕೊಡ್ಬೇಕು. ನಾಳೆ ಬೆಳಗ್ಗೆ ನೀವು ಬಸ್ಸ್ಟ್ಯಾಂಡಿಗೆ ಬರಕೂಡ್ದು ! ನಿಮ್ಮ ಹಿತಕ್ಕಾಗಿಯೇ ಹೇಳ್ತೀದೀನಿ.”

ಜಯದೇವ ಯಾವ ಉತ್ತರವನ್ನೂ ಕೊಡದೆ ನಡೆದ.

ತಡವಾಗಿ ಮಲಗಿದ್ದರೂ ಬೆಳಗ್ಗೆ ಜಯದೇವನಿಗೆ ಬೇಗನೆ ಎಚ್ಚರ ವಾಯಿತು. ಪ್ರಾತರ್ವಿಧಿಗಳನ್ನಾತ ಮುಗಿಸಿದ. ಕಾಫಿಗೆಂದು ಆನಂದ ವಿಲಾಸಕ್ಕೆ ಹೋಗುವುದರ ಬದಲು, ಬಸ್ ನಿಲ್ದಾಣಕ್ಕೆ ನಡೆದರಾಯಿತೆಂದುಕೊಂಡ.

ಆತ ನಿಲ್ದಾಣಕ್ಕೆ ಬಂದಾಗ ಅದು ನಿರ್ಜನವಾಗಿತ್ತು,

ಒಳಗೆ ಕುಳಿತು ಕಾಫಿ ಕೇಳಿದಾಗ ಒಬ್ಬ ಹುಡುಗನೆಂದ: