ಪುಟ:Duurada Nakshhatra.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ರಂಗರಾಯರು ಆ ಬೆಳಗ್ಗೆಯೇ ಹೊರಟು ಹೋದ ವಿಷಯವೂ ಜಯದೇವ ಬಸ್ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಟ್ಟ ವಿಷಯವೂ ವೆಂಕಟರಾಯರಿಗಾಗಲೀ ನಂಜುಂಡಯ್ಯನಿಗಾಗಲೀ ತಿಳಿದು ಬರುವುದರಲ್ಲಿ ಸಂದೇಹ ವಿರಲಿಲ್ಲ. ಆದರೆ ಜಯದೇವ ಮಾತ್ರ ತಾನಾಗಿಯೇ ಆ ಮಾತನ್ನೆತ್ತಲಿಲ್ಲ.

ವಿರೂಪಾಕ್ಷ ಏದುತ್ತ ಬಂದು ಒಬ್ಬರೇ ಇದ್ದ ವೆಂಕಟರಾಯರ ಮುಂದೆ ನಿಂತು ವರದಿಯೊಪ್ಪಿಸಿದ

“ಹೆಡ್ ಮೇಷ್ಟ್ರು ಇವತ್ತು ಬೆಳಗ್ಗೆನೇ ಬಸ್ನಲ್ಲಿ ಹೋದ್ರಂತೆ ಸಾರ್.” ಮುಖ್ಯೋಪಾಧ್ಯಾಯರಿಗೆ ಎಲ್ಲಿಲ್ಲದ ಸಿಟ್ಟು ಬಂತು.

* ಯಾವ ಹೆಡ್ಮೇಷ್ಟ್ರೋ ?”

ವಿರೂಪಾಕ್ಷ ಕಕಾಬಿಕ್ಕಿಯಾದ.

“ಹೆಡ್ಮೇಷ್ಟ್ರು ಸಾರ್."

ವೆಂಕಟರಾಯರು ಮುಷ್ಟಿ ಬಿಗಿದು ಮೇಜಿನ ಮೇಲೆ ಗುದ್ದಿದರು.

“ಇಲ್ಲಿ ನಾನು ಹೆಡ್ಮೇಷ್ಟ್ರು ತಿಳಿತೇನೋ?”

ವಿರೂಪಾಕ್ಷನಿಗೆ ತನ್ನ ತಪ್ಪು ತಿಳಿಯಿತು. ನಿಸ್ತೇಜವಾಯಿತು ಆತನ ಮುಖ..ಹೊಸ ಮುಖ್ಯೋಪಾಧ್ಯಾಯರ ಕೆಂಗಣ್ಣು ನೋಡಿ ಭಯವಾಯಿತು.

“ಯಾರು ನೀನು? ನಿನ್ನ ಹೆಸರೇನು?

“ವಿರೂಪಾಕ್ಷ ಸಾರ್. ನಂಜುಂಡಯ್ಯ ಮೇಷ್ಟ್ರ ತಮ್ಮ ಸಾರ್.”

ಒಮ್ಮೆಲೆ, ವೆಂಕಟರಾಯರ ಕೋಪ ಇಳಿದು ಹೋಯಿತು. ಅವರು ಮುಗುಳ್ನಗಲೆತ್ನಿಸುತ್ತಾ ಕೈ ಬೀಸಿ ಅಂದರು :

“ಕ್ಲಾಸಿಗೆ ಹೋಗು.”

ರಂಗರಾಯರು ಹೊರಟು ಹೋದ ವಿಷಯ ತಿಳಿದಾಗ ನಂಜುಂಡಯ್ಯ, ಜಯದೇವನನ್ನು ಕೇಳಿದರು:

“ಸುದ್ದಿ ಕೇಳಿದಿರಾ ಜಯದೇವ ? -ರಂಗರಾಯರು ಇವತ್ತು ಬೆಳಗ್ಗೆನೇ ಹೋದರಂತೆ.”

“ಹುಂ, ಬಸ್ ನಿಲಾಣದಲ್ಲಿ ನನಗೆ ನೋಡೋಕೆ ಸಿಕ್ಕಿದ್ರು.”

“ಹೌದೆ? ಅವರು ಹೋಗೋದು ಗೊತ್ತಿತ್ತೇನು ನಿಮಗೆ?”