ಪುಟ:Duurada Nakshhatra.pdf/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಗೊತ್ತಿತ್ತು-ಎನ್ನಬೇಕೆಂದು ತೋರಿತು ಜಯದೇವನಿಗೆ..' ಹಾಗೆಯೇ ಹೇಳೆಂದು ಮನಸಿನ ಒಂದು ಭಾಗ ಒತ್ತಾಯಿಸಿತು. ಮನಸಿನ ಇನ್ನೊಂದು ಭಾಗ, ಸುಳ್ಳು ಹೇಳಿದರೂ ತಪ್ಪಿಲ್ಲ-ಇಲ್ಲವೆನ್ನು, ಎಂದು ಆಗ್ರಹ ತೊಟ್ಟಿತು.

ಬಲವಾಗಿತ್ತು ಆ ಆಗ್ರಹ,

“ಇಲ್ಲ! ಕಾಫಿಗೇಂತ ಬೆಳಿಗ್ಗೆ ಹೋದವನಿಗೆ ಅಕಸ್ಮಾತ್ ಸಿಕ್ಕಿದರು.”

“ಓ!"

ನಂಜುಂಡಯ್ಯ, ಪರೀಕ್ಷಿಸುವ ದೃಷ್ಟಿಯಿಂದ ಜಯದೇವನನ್ನು ನೋಡಿದರು. ಆ ಮಾತನ್ನು ಸತ್ಯವೆಂದು ನಂಬಲು ಅವರು ಸಿದ್ಧವಿರಲಿಲ್ಲ. ಅಂತೂ ಈ ಜಯದೇವ ಕಟ್ಟುನಿಟ್ಟಿನ ಬ್ರಾಹ್ಮಣನೇ ಸರಿ, ರಂಗರಾಯನ ಪಕ್ಷಪಾತಿಯೇ–ಎಂದು ಅವರಿಗೆ ತೋರಿತು. ಮರುಕ್ಷಣವೇ ವೆಂಕಟರಾಯನೂ ಬಾಹ್ಮಣನೇ, ಆತನ ಬುದ್ಧಿ ಯಾಕಿರಬಾರದು ಈ ಜಯದೇವನಿಗೆ? ಅನಿಸಿತು.

ವೆಂಕಟರಾಯರು ಮೂದಲಿಸುತ್ತ ಅಂದರು :

“ಸಭ್ಯ ವರ್ತನೇನೂ ತಿಳೀದೇನೋ ಆತನಿಗೆ? ಬಂದು ಹೇಳ್ಬಿಟ್ಟಾದ್ರೂ ಹೋಗ್ವೇಕೋ ಬೇಡ್ವೋ?”

ರಂಗರಾಯರ ನಿಂದನೆಯನ್ನು ಸಹಿಸಲಾರದೆ ಜಯದೇವನೆಂದ:

“ನಿಮಗೆ ಹೇಳೋಕೆ ಮರೆತು ಹೊಯ್ತು, ನಿಮ್ಮಿಬ್ಬರಿಗೂ ನಮಸ್ಕಾರ ತಿಳಿಸ್ಬೇಕೂಂತಂದ್ರು.”

“ಹಾಗೊ ! ಹುಂ.”

ತಾನು ಮತ್ತು ಅವರಿಬ್ಬರ ನಡುವೆ ತನಗರಿಯದೆಯೇ ಅಡ್ಡ ಗೋಡೆಯೊಂದು ಎದ್ದಿತೆಂಬುದು ಜಯದೇವನಿಗೆ ಸ್ಪಷ್ಟವಾಯಿತು. ಅದನ್ನು ತಪ್ಪಿಸಬೇಕೆಂದು ಆತ ಶ್ರಮಿಸಿದ್ಯ, ಆದರೆ ಅದು ಅನಿವಾರ್ಯವಾಗಿತ್ತು,

ಇನ್ನು ಆದುದಾಗಲಿ–ಎಂದುಕೊಂಡ ಜಯದೇವ, ತನ್ನ ಮನಸಾಕ್ಷಿಗೆ ಅನ್ಯಾಯವಾಗುವಂತೆ ವರ್ತಿಸಲು ಆತ ಇಚ್ಛಿಸಲಿಲ್ಲ, ಸಾಧ್ಯವಾದಷ್ಟು ಮಟ್ಟಿಗೆ ಆತ್ಮಾಭಿಮಾನವನ್ನು ಉಳಿಸಿಕೊಂಡೇ ಬದುಕಬೇಕೆಂದು ಆತ ಬಯಸಿದ.

ಆದರೆ ಸುಲಭವಾಗಿರಲಿಲ್ಲ ಅಂತಹ ಬದುಕು.