ಪುಟ:Duurada Nakshhatra.pdf/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಹಿಂದಿನ ಮುಖ್ಯೋಪಾಧ್ಯಾಯರು ಅಧೋಗತಿಗೆ ಇಳಿಸಿದ್ದರೆಂದು ಹೇಳಲಾದ ಶಾಲೆಯನ್ನು ಮತ್ತೆ ಊರ್ಜಿತ ಸ್ಮಿತಿಗೆ ತರಲು ಬದ್ಧ ಕಂಕಣರಾದ ವೆಂಕಟರಾಯರು ಸುಧಾರಣೆಗಳನ್ನು ಜಾರಿಗೆ ತರತೊಡಗಿದರು. ಅವರೂ ನಂಜುಂಡಯ್ಯನ ದೃಷ್ಟಿಯಲ್ಲಿ 'ಹಳೆ ಮರ್ಜಿಯ ಹಳೇ ಮೆಟ್ರಿಕ್ಯುಲೇಟ್,' ತಾವು ಮುಂದೆ ಮುಖ್ಯೋಪಾಧ್ಯಾಯನಾಗಿ ಬರುವುದಕ್ಕೆ ಪೂರ್ವ ಭಾವಿಯಾಗಿ ಸ್ವಲ್ಪ ಕಾಲವಷ್ಟೇ ಇರುವ ಈ ಹಳಬ ಬೇಕಾದ್ದನ್ನು ಮಾಡಿ ಕೊಳ್ಳಲಿ–ಎಂದು ನಂಜುಂಡಯ್ಯ ಸುಮ್ಮನಾದರು.

ವೆಂಕಟರಾಯರ ಸುಧಾರಣೆಯಲ್ಲಿ ಮೊದಲನೆಯದು ಶಾಲೆಯ ಘನತೆಯನ್ನುಳಿಸುವ ಕಾರ್ಯಕ್ರಮ. ಜಯದೇವ ಅಲ್ಲಿ ಮಲಗಲೇ ಕೂಡದೆಂಬುದು ವೆಂಕಟರಾಯರ ದೃಢ ಅಭಿಪಾಯವಾಗಿತ್ತು.

“ಇನ್ನೊಂದು ವಾರದೊಳಗೆ ನೀವು ಬೇರೆ ಕಡೆ ಏರ್ಪಾಡು ಮಾಡಲೇ ಬೇಕು” ಎಂದು ಅವರು ಖಡಾಖಂಡಿತವಾಗಿ ಹೇಳಿಯೇ ಬಿಟ್ಟರು.

ಶಾಲೆಯಲ್ಲಿಯೇ ಇರಿ-ಎಂದು ಹಿಂದೆ ಹೇಳಿದ್ದ ನಂಜುಂಡಯ್ಯ ಈಗ ಮಾತೆತ್ತಲಿಲ್ಲ.

ಜಯದೇವ ನಾಲ್ಕನೆಯ ತರಗತಿಯಲ್ಲಿ ಹುಡುಗರ ನೆರವು ಕೇಳಿದ:

“ಯಾರಾದರೂ ನನಗೊಂದು ಒಳ್ಳೆ ರೂಮು ದೊರಕಿಸಿ ಕೊಡ್ರೀರೇನಪ್ಪ? ಸ್ಕೂಲ್ನಲ್ಲೆ ಇದ್ದು ಬೇಜಾರಾಗಿದೆ.”

“ಓ! ಅದಕ್ಕೇನ್ಸಾರ್? ಹುಡುಕಿ ಕೊಡ್ರೀವಿ” ಎಂಬ ಉತ್ತರ ಹಲವು ಕಂಠಗಳಿಂದ ಬಂತು.

ಕೊಠಡಿ ಹುಡುಕುತಿದ್ದುದಕ್ಕೆ ನಿಜವಾದ ಕಾರಣವೇನೆಂಬುದು ಕೆಲವು ಹುಡುಗರಿಗೆ ಹೊಳೆದೇ ಹೊಳೆಯಿತು.

ಮಾರನೆ ದಿನ ಒಬ್ಬಿಬ್ಬರು ಹುಡುಗರು ಒಂದೆರಡು ಕೊಠಡಿಗಳನ್ನು ಜಯದೇವನಿಗೆ ತೋರಿಸಿದರು. ನಾಲ್ಕೈದು ರೂಪಾಯಿ ಬಾಡಿಗೆ. ಹೇಳಿಕೊಳ್ಳುವ ಅನುಕೂಲತೆಯೊಂದೂ ಇರಲಿಲ್ಲ, ಆ ಎರಡರಲ್ಲೇ ಯಾವುದಾದ ರೊಂದನ್ನು ಗೊತ್ತು ಮಾಡುವುದೇ ಮೇಲೆಂದುಕೊಂಡ ಜಯದೇವ.

ಅಷ್ಟರಲ್ಲೆ ನಾಗರಾಜ ಎಂಬೊಬ್ಬ ವಿದ್ಯಾರ್ಥಿ, ಜಯದೇವನ ಬಳಿಗೆ ಪ್ರತ್ಯೇಕವಾಗಿ ಬಂದು ಹೇಳಿದ: