ಪುಟ:Duurada Nakshhatra.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಪ್ಪರಿಸುವವರಿಗೆ ಶುಂಠಿಸಕ್ಕರೆಯನ್ನು ಕೊಡಲು ಹೊರಡುವುದು ಸುಲಭದ ಕೆಲಸ ಹೇಗಾದೀತು?

ಆದರೆ ಕನ್ನಡ ಓದುಗರು;ಆ ಭಯವನ್ನು ಬಹಳ ಮಟ್ಟಿಗೆ ನಿವಾರಣೆ ಮಾಡಿರುವರೆನ್ನುವುದು ವಿಚಾರಪರರೆಲ್ಲರಿಗೂ ಸಮಾಧಾನದ ವಿಷಯ; ಮನೋರಂಜನೆಯ ಜತೆಗೆ ವಿಚಾರ ಪ್ರಚೋದನೆಯನ್ನೂ ಮಾಡಬಯಸುವ ಬರಹಗಾರರೆಲ್ಲರಿಗೂ ಸಂತೋಷದ ವಿಷಯ. ದೂರದ ನಕ್ಷತ್ರವನ್ನು ಕುರಿತು 'ಸಪ್ಪೆ' ಎಂದು ಹೇಳಿದವರಿಗಿಂತಲೂ ಒಪ್ಪಿಗೆ ಸೂಚಿಸಿದವರ ಸಂಖ್ಯೆಯೇ ಹೆಚ್ಚಿನದು. ಅದನ್ನು ಓದಿರುವ ಉಪಾಧ್ಯಾಯರು ಯಾರೂ "ಇದು ನಮ್ಮ ಕಥೆಯಲ್ಲ," ಎಂದು ಹೇಳಿಲ್ಲ. "ಬರೆದಿರುವುದೊಂದು, ವಸ್ತು ಸ್ಥಿತಿ ಇನ್ನೊಂದು, ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.

ಓದುಗರು, ಸೃಷ್ಟನೆಯ ಸಾಹಿತ್ಯವನ್ನು ಬದುಕಿನಲ್ಲಿರುವ ಮೂಲದೊಡನೆ ಹೋಲಿಸಿನೋಡುವ ಪ್ರವೃತ್ತಿಯೂ ಹೊಸದು. ಇಂಥವರ ಸಂಖ್ಯೆ ಸಣ್ಣದಾದರೂ ತೃಪ್ತಿಕರವಾದುದು. ಬದುಕಿಗೂ ಸಾಹಿತ್ಯಕ್ಕೂ ನಿಕಟ ಸಂಬಂಧವಿದೆ ಎನ್ನುವ ವಿಚಾರ. ದಿನದಿಂದ ದಿನಕ್ಕೆ ಬಡಕಲಾಗುತ್ತಿಲ್ಲ-ಬೆಳೆಯುತ್ತ ಸಾಗಿದೆ...

'ದೂರದ ನಕ್ಷತ್ರ'ವನ್ನು ನಾನು ಬರೆದು ಮುಗಿಸಿದಾಗ, 'ಇದು ಅಪೂರ್ಣ' ಎನ್ನುವ ಭಾವನೆ ನನ್ನಲ್ಲಿ ಮೂಡಿ ಬಲಗೊಂಡಿತು. ಹಲವಾರು ಓದುಗರೂ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಲೆಂದು ನಗರಕ್ಕೆ ಹಿಂತಿರುಗಿದ ಜಯದೇವ, ಪುನಃ ಆ ಹಳ್ಳಿಗೆ ಮರಳುವನೆ? ಅದೇ ವೃತ್ತಿಯನ್ನು ಕೈಗೊಳ್ಳುವನೆ? ಎಂದು ಅವರು ನನ್ನನ್ನು ಕೇಳಿದರು.

ಆ ಪ್ರಶ್ನೆಗಳಿಗೆ ಉತ್ತರ, ನನ್ನ ಇತ್ತೀಚಿನ ಕಾದಂಬರಿಯಾದ 'ನವೋದಯ'. ಜಯದೇವನ ವೈಯಕ್ತಿಕ ಜೀವನ, ನಾಡಿನ ಬದುಕಿನೊಡನೆ ಹಾಸುಹೊಕ್ಕಾಗಿ ಬೆರೆತು ಮುಂದುವರಿಯುವ ಚಿತ್ರ ಅದರಲ್ಲಿದೆ. 'ದೂರದ ನಕ್ಷತ್ರ'ದ ಮುಂದಿನ ಭಾಗವೆಂದು, ವಾಸ್ತವತೆಯ ಮೂಸೆಯಲ್ಲಿ ಆದರ್ಶವನ್ನು ಪುಟಕ್ಕಿಡುವ ಜಯದೇವನ ಕಥೆಯೆಂದು, ಓದುಗರು 'ನವೋದಯ'ವನ್ನು ಬರಮಾಡಿಕೊಳ್ಳುವರೆಂಬ ನಂಬಿಕೆ ನನಗಿದೆ.