ಪುಟ:Duurada Nakshhatra.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಲ್ಲ ಸಾಮರ್ಥವೂ ಸಣ್ಣ ಪುಟ್ಟ ಕೆಲಸಗಳಿಗಾಗಿಯೇ ವಿನಿಯೋಗವಾಗುತ್ತಿತ್ತು.

ಒಂದು ವಿಷಯದಲ್ಲಿ ಮಾತ್ರ ಅವರು ಕೃತಕೃತ್ಯರಾಗಲೇ ಇಲ್ಲ, ಅದು ವಿದ್ಯಾರ್ಥಿಗಳ ಒಲವನ್ನು ಸಂಪಾದಿಸುವ ವಿಷಯ. ಎದುರಿಗೇನೋ ಹುಡುಗರು ಭಯಭೀತಿಗಳನ್ನು ವ್ಯಕ್ತಪಡಿಸುತಿದ್ದರು. ಆದರೆ ವೆಂಕಟರಾಯರು ಮುಖ ತಿರುಗಿಸಿದೊಡನೆ, ಅವರ ಹಾವ ಭಾವಗಳನ್ನು ಅಣಕಿಸುತ್ತ, ಲೇವಡಿ ಮಾಡುತಿದ್ದರು.

ಸ್ವಲ್ಪ ಮುಟ್ಟಿಗೆ ಈ ಮಾತು ನಂಜುಂಡಯ್ಯನಿಗೂ ಅನ್ವಯಿಸುತ್ತಿತ್ತು.

ಜಯದೇವ ಮಾತ್ರ ಆ ಕ್ಷೇತ್ರದಲ್ಲಿ ಸಂಪೂರ್ಣ ವಿಜಯಿಯಾಗಿದ್ದ. ಪಾಠ ಹೇಳಿಕೊಡುವ ಕೆಲಸಕ್ಕೆ ಹೊಸಬನಾದರೂ ಆತ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ. ಒಬ್ಬಂಟಿಗನಾಗಿ ಜಯದೇವ ದೊರೆತರೆ ಸಾಕು, ಹುಡುಗರು ಇಲ್ಲವೆ ಹುಡುಗಿಯರು ಅವನನ್ನು ಮುತ್ತಿಕೊಳ್ಳುತಿದ್ದರು. ಹಾದಿಯಲ್ಲಿ ಹುಡುಗರು ಕಾಣಲು ದೊರೆತಾಗ ಜಯದೇವನಿಗೆ ಸಿಗುತಿದ್ದ ನಮಸ್ಕಾರಗಳೂ ಅಷ್ಟೇ. ఆ ವಂದನೆಗಳು ಪ್ರೀತಿಪೂರ್ವಕವಾಗಿ ಬರುತಿದ್ದುವು.. ತರಗತಿಗಳ ಒಬ್ಬಿಬ್ಬರು ಪೋಲಿ ಹುಡುಗರು ಕೂಡ ಜಯದೇವನ ನಗೆಯ ಆಹ್ವಾನಕ್ಕೆ ಮಾರು ಹೋಗುತಿದ್ದರು. ಹಾಗೆ ಹಾದಿಯಲ್ಲಿ ನಮಸ್ಕಾರಗಳನ್ನು ಸ್ವೀಕರಿಸಿದಾಗಲೆಲ್ಲ ಜಯದೇವನಿಗೆ ತಾನು ವಿದ್ಯಾರ್ಥಿಯಾಗಿದ್ದ ಕಾನಕಾನಹಳ್ಳಿ ಶಾಲೆಯು ನೆನಪಾಗುತ್ತಿತ್ತು, ಅಲ್ಲೊಬ್ಬ ಉಪಾಧ್ಯಾಯಧಾಯರು, ಶಾಲೆಯ ಹೊರಗೆ ಬೀದಿಯಲ್ಲಿ ವಿದ್ಯಾರ್ಥಿಗಳು ಯಾರಾದರೂ ತಮಗೆ ನಮಸ್ಕರಿಸದೇ ಹೋದರೆ ಗುರುತಿಟ್ಟುಕೊಂಡು ಮರುದಿನ ತರಗತಿಯಲ್ಲಿ ಅವರನ್ನು ಬೆಂಚಿನ ಮೇಲೆ ನಿಲ್ಲಿಸಿ, ಶಿಷ್ಟಾಚಾರವನ್ನು ಕಲಿಸಿಕೊಡುತಿದ್ದರು. ಆ ನೆನಪು ಆದಾಗಲೆಲ್ಲ ಜಯದೇವನಿಗೆ ನಗು ಬರುತಿತ್ತು.

ಮನಸ್ಸು ಉಲ್ಲಾಸವಾಗಿದ್ದ ದಿನಗಳಲ್ಲಿ ಜಯದೇವ ಬೆಂಗಳೂರಿಗೆ ವೇಣುಗೋಪಾಲನಿಗೆ ಕಾಗದ ಬರೆಯುತಿದ್ದ, ಒಮ್ಮೊಮ್ಮೆ ಕಾನಕಾನಹಳ್ಳಿಗೆ ತನ್ನ ತಂದೆಗೂ ಕೂಡಾ.

ಅವರಿಂದಲೂ ಆಗಾಗ್ಗೆ ಕಾಗದಗಳು ಬರುತಿದ್ದುವು. ಜಗತ್ತು ವಿಶಾಲ ವಾಗಿದೆ ಎಂಬುದನ್ನು ತೋರಿಸಿಕೊಡುತಿದ್ದುವು.

ಆದರೆ, ಘಾಸಿಗೊಂಡ ಹೃದಯದೊಡನೆ ವರ್ಗವಾಗಿ ಹೋದ ರಂಗರಾಯರು ಜಯದೇವನಿಗೆ ಬರೆಯಲೇ ಇಲ್ಲ......