ಪುಟ:Duurada Nakshhatra.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯಲ್ಲಿ. 'ಪಿ.ಇಂದಿರಾ' ಎಂದು ಕರೆದರೂ ತಲೆಯೆತ್ತಿ ಆಕೆಯನ್ನು ನೋಡುತ್ತಿರಲಿಲ್ಲ. ಸ್ವರ ಕೇಳಿದೊಡನೆ ಹಾಜರಿಯ ಗುರುತು ಹಾಕುತಿದ್ದ. ಉತ್ತರ ಬರದೇ ಇದಾಗ ಮಾತ್ರ ತಲೆಯೆತ್ತಿ ಕೇಳುತಿದ್ದ:

“ಯಾಕ್ಟಂದಿಲ್ಲ? ರಜೆ ಅರ್ಜಿಯಾದರೂ ಕಳಿಸ್ಬಾರ್ದೆ?"

ಈಗ ಅದೇ ಹುಡುಗಿಯ ತಾಯಿ ಹೇಳಿ ಕಳುಹಿಸಿದ್ದರು:

“ನಮ್ಮ ಮನೆಗೆ ಬಂದು ಪಾಠ ಹೇಳಿ ಕೊಡಬಹುದೇ?"

ಆ ವರೆಗೂ ಪುರಸೊತ್ತಿಲ್ಲವೆನ್ನುತ್ತ ಬಂದಿದ್ದ ಜಯದೇವನ ಮನಸ್ಸು ಹೇಳಿತು:

ಒಪ್ಪಿಕೋ....ಒಪ್ಪಿಕೋ....

ಮನಸಿನೊಳಗೆ ಕ್ಷಣಕಾಲ ನಡೆದ ದ್ವಂದ್ವ, ಆ ವಿಚಾರಗಳ ನಡುವೆ ಸುನಂದೆಯ ಮುಖ ಕಾಣಿಸುತಿತ್ತು... ವಯಸ್ಸಿನಲ್ಲಿ ದೊಡ್ಡವಳಾಗಿದ್ದ ಹುಡುಗಿಯೊಬ್ಬಳಿಗೆ ಪಾಠ ಹೇಳಿಕೊಡುವ ಅವಕಾಶ.. ಆ ಸಾಮಿಪ್ಯ.. ಇಂದಿರೆಯ ಚಂಚಲ ದೃಷ್ಟಿ... ... ಜಯದೇವನ ಮನಸು ಕುತೂಹಲಿಯಾಗಿತ್ತು, ಅದೊಂದು ಪ್ರಯೋಗ–ಒಪ್ಪಿಕೊ, ಎನ್ನುತಿತ್ತು. ಜತೆಯಲ್ಲೆ, ಹುಡುಗಿಗೆ ಪಾಠ ಹೇಳಿಕೊಡಲು ಹಿಂಜರಿಯುವ ತಾನೇನು ಹಳೆಯ ಕಾಲದ ಮಡಿ ಸಂಪ್ರದಾಯವಂತನೆ–ಎಂದು ಪ್ರಶ್ನಿಸಿತು. ಆದರೆ ಆತನ ಒಳದೃಷ್ಟಿ ಸುನಂದೆಯ ಮುಖವನ್ನೇ ನಿರೀಕ್ಷಿಸುತ್ತಾ 'ಏನು ಮಾಡಲಿ?” ಎಂದು ಕೇಳುತಿತ್ತು. ಆಕೆ ಮಾತ್ರ ಮೌನವಾಗಿದ್ದಳು. ಮುಗ್ದ ತುಟಿಗಳು ಅರಳದ ಮೊಗ್ಗುಗಳಾಗಿ ಬಿಗಿದುಕೊಂಡು ಸುಮ್ಮನಿದ್ದರೂ ಕಣ್ಣುಗಳು ನಗುತಿದ್ದುವು.

ಪ್ರಭಾಮಣಿಗೆ ತಿಳಿಯದಂತೆಯೇ ನಿಟ್ಟುಸಿರು ಬಿಟ್ಟ ಜಯದೇವನೆಂದ:

“ನನಗೆ ಬಿಡುವೇ ಇಲ್ಲ ಪ್ರಭಾ, ಅಲ್ದೆ, ನಾಲ್ಕನೆ ತರಗತಿಯವರಿಗೆ ಹೆಡ್ಮಷ್ಟೇ ಕೋಚಿಂಗ್ ಕಾಸ್ ತಗೋತಾರೆ.”

“ಅದು ಅವರ್ಮನೇಲಿ. ಅಲ್ಲಿಗೆಲ್ಲಾ ಇಂದಿರಾನ ಕಳಿಸಿಕೊಡಲ್ವಂತೆ. ನೀವು ಅವರ ಮನೆಗೇ ಬಂದು ಪಾಠ ಹೇಳ್ಬೇಕಂತೆ. ನೀವು ಕೇಳಿದ ಫೀಸು ಕೊಡ್ತಾರಂತೆ. ಸಾಧ್ಯವೆ ಸಾರ್? ಕೂಗ್ಲಾ, ಇಂದಿರಾನ?”

“ಬೇಡ ಪ್ರಭಾ, ನಿಜವಾಗ್ಲೂ ನನಗೆ ಪುರಸತ್ತಿಲ್ಲ.”

“ಯಾಕೆ, ನೀವೂ ಪರೀಕ್ಷೆ ಕಟ್ಟಿದೀರಾ ಸಾರ್?”

“ಹೂ೦..ಹೂಂ.. ಪರೀಕ್ಷೆ ಕಟ್ಟಿದೀನಿ.”