ಪುಟ:Duurada Nakshhatra.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಗಲ್ಲ, ನಗುವೂ ಇಲ್ಲ, ಮಾತೂ ಇಲ್ಲ, ಮೌನವಾಗಿ ಕೂತಿದ್ರೆ ಏನೋ ಒಂದು ಥರ ಆಗುತ್ತೆ.”

ವೆಂಕಟರಾಯರ ಎದೆ ಚಿಳ್ಳೆಂದಿತು. ಮುಗುಳ್ನಗಲು ಅವರು ವಿಫಲರಾಗಿ ಯತ್ನಿಸಿದರು.

“ಮರ್ಜಿ ಹೇಗೆ? ಎಲ್ಲಿ ಉಳ್ಕೊತಾರೆ ಬಂದ್ರೆ?”

“ಹೋದ್ದಲ ಬಂದಾಗ, ಈ ಊರಲ್ಲಿ ಮುಸಾಫಿರ್ ಖಾನೆ ಇಲ್ವೆ ?– ಅಂದು ಇಲ್ಲ-ಅಂದಿದ್ದಕ್ಕೆ, ಯಾರ ಮನೆಗೂ ಹೋಗೋಕೆ ಒಪ್ದೆ, ಶಾಲೇಲೇ ಇದ್ಬಿಟ್ರು. ಜತೇಲಿ ಜವಾನ. ನೀವು ನಂಬ್ತೀರೋ ಇಲ್ವೋ ಪೇಟೆಯಿಂದ ಅಕ್ಕಿ ತರಕಾರಿ ಹಾಲು ಮೊಸರು ಜವಾನ ಕೊಂಡ್ಕೊಂಡು ಬಂದ ಸೌದೆ ಮಾತ್ರ ಈ ಕಾಡಿನಲ್ಲಿ ಮಾರಾಟಕ್ಕೆ ಸಿಗೋದಿಲ್ಲಾಂತ ಎಲ್ಲಿಂದಲೋ ಇಸಕೊಂಡು ಬಂದಿದ್ದಾಯಿತು!”

“ಗೊತ್ತು ಬಿಡಿ. ಈ ಜಾತೀನ ನೋಡಿದೀನಿ.”

ವೆಂಕಟರಾಯರ ಬಹಿರಂಗ ಮೂದಲಿಕೆ,ನಂಜುಂಡಯ್ಯನವರ ಸೂಕ್ಷ್ಮ ವ್ಯಂಗ್ಯ, ಆ ಅಧಿಕಾರಿಯ ಬಗೆಗೆ ಜಯದೇವನಲ್ಲಿ ಆದರ ಮೂಡಿಸಿತು.

ಇನ್ಸ್ಪೆಕ್ಟರು ಯಾವ ಜಾತಿ ಎಂದು ತಿಳಿದುಕೊಳ್ಳಲು ವೆಂಕಟರಾಯರು ಕುತೂಹಲಿಯಾಗಿದ್ದರು. ಅವರು ಬಾಹ್ಮಣನಲ್ಲವೆಂಬುದಷ್ಟು ನಂಜುಂಡಯ್ಯನಿಗೆ ಗೊತ್ತಿದ್ದರೂ ಅವರಾಗಿ ಹೇಳಲಿಲ್ಲ.

ವೆಂಕಟರಾಯರು ಇನ್ಸ್ಪೆಕ್ಟರರ ಸ್ವಾಗತಕ್ಕೆ ಸಿದ್ಧತೆ ನಡೆಸಿದರು. ಚಿಕ್ಕ ಪರೀಕ್ಷೆಗಾಗಿ ಓದುತ್ತಲಿದ್ದ ವಿದ್ಯಾರ್ಥಿಗಳಲ್ಲಿ ಕೆಲವರನ್ನಷ್ಟೆ ಆಯ್ದು ಇನ್ಸ್ಪೆಕ್ಟರ ಮುಂದೆ ಪ್ರಶ್ನೆ ಕೇಳುವುದೆಂದು ಗೊತ್ತಾಯಿತು. ಶಾಲಾ ಕಟ್ಟಡ ಸ್ವಚ್ಛವಾಯಿತು. ಒಳ್ಳೆಯ ಬಟ್ಟೆಗಳನ್ನೇ ಹಾಕಿಕೊಂಡು ಬರಬೇಕೆಂದು ಸಾರಿ ಹೇಳಿದಾಯಿತು. ಎಂದಿಲ್ಲದ ಚಟುವಟಿಕೆಯನ್ನು ಪ್ರದರ್ಶಿಸುತ್ತ ವೆಂಕಟರಾಯರು ಓಡಾಡಿದರು.

ರೇಂಜ್ ಇನ್ಸ್ಪೆಕ್ಟರು ರಾಧಾಕೃಷ್ಣಯ್ಯ ಬಂದಿಳಿದರು. ಅವರು ಸಂತೋಷಗೊಳ್ಳಲಿಲ್ಲ. ರೇಗಲಿಲ್ಲ, ಏನೂ ಅನ್ನಲಿಲ್ಲ. ನಂಜುಂಡಯ್ಯ ಹೇಳಿದ್ದ ಹಾಗೆ, ಅವರ ಮೌನವೇ ವಿಚಿತ್ರವಾಗಿತ್ತು.