ಪುಟ:Duurada Nakshhatra.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉಪಾಧ್ಯಾಯರೆಂದು ಯಾರನ್ನು ಉದ್ದೇಶಿಸಿ ಬರೆದರೆಂಬುದು ವೆಂಕಟರಾಯರಿಗೂ ನಂಜುಂಡಯ್ಯನಿಗೂ ಹೊಳೆಯಿತು. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ,

ಶಾಲೆಯ ವಾರ್ಷಿಕ ದಿನಾಚರಣೆಯು ಸಿದ್ಧತೆ ನಡೆಯಿತು. ಜಯದೇವನನ್ನು ಹೆಚ್ಚಿನ ದುಡಿತಕ್ಕೆ ಹಚ್ಚಿ ತಪ್ಪನ್ನಾದರೂ ಕಂಡುಹಿಡಿಯುತ್ತಿರಬಹುದೆಂದು ಮುಖ್ಯೋಪಾಧ್ಯಾಯರು ಭಾವಿಸಿದರು.

ಆಫೀಸು ಕೊಠಡಿಯಲ್ಲಿ ಜಯದೇವ ಸಲಹೆಗಳನ್ನು ಕೊಟ್ಟ.

“ವಿದ್ಯಾಭ್ಯಾಸ ಸುಧಾರಣೆಯ ವಿಷಯವಾಗಿ ಆ ಸಂದರ್ಭದಲ್ಲಿ ಒಂದು ಉಪನ್ಯಾಸ ಮಾಲೆ ಏರ್ಪಡಿಸೋದು ಒಳ್ಳೆದು.”

“ಉಪನ್ಯಾಸ ಮಾಲೇನೇ ? ವಾರ್ಷಿಕೋತ್ಸವದ ಸಮಯದಲ್ಲಿ ಉಪನ್ಯಾಸ ಯಾರಿಗ್ರೀ ಬೇಕು?

“ಹಾಗಂದ್ರೆ ಹ್ಯಾಗ್ಸಾರ್?"

'ಛೆ ! ಛೆ ! ಮಾಲೆ ಗೀಲೆ ಒ೦ದೂ ಬೇಡಿ, ನಾವೇ ಯಾರಾದರೂ ಸುಧಾರಣೆಯ ವಿವರ ಏನೂಂತ ವಿವರಿಸಿದಾಯ್ತು...”

“ಅಧ್ಯಕ್ಷ ಸ್ಥಾನಕ್ಕೆ ಹೊರಗಿಂದ್ಲೇ ಯಾರನ್ನಾದರೂ ಕರಿಸೋಣ. ಆಗ್ದೆ?" ಎಂದು ನಂಜುಂಡಯ್ಯ ಕೇಳಿದರು.

“ಯಾರನ್ನು ಹೇಳಿ?”

ಜಯದೇವನೆಂದ:

“ಸಾರ್ ನನ್ದೊಂದು ಸೂಚನೆ ಇದೆ. ಸಾಮಾನ್ಯವಾಗಿ ಮೇಲಿನ ಅಧಿಕಾರಿಗಳನ್ನೇ ಕರೆಯೋದು ರೂಢಿ ಅಲ್ವೆ? ಈ ಸಾರೆ ಯಾರಾದರೂ ಪ್ರಖ್ಯಾತರಾದ ಸಾಹಿತಿಗಳ್ಳ ಕರೆಸೋಣ.”

“ಸಾಹಿತಿಗಳು ಈ ಕೊಂಪೆಗೆ ಯಾಕ್ರೀ ಬರ್ತಾರೆ ? ಅವರಿಗೆ ಫಸ್ಟ್ ಕ್ಲಾಸೊ ಸೆಕೆಂಡ್ ಕ್ಲಾಸೊ ಪ್ರಯಾಣ ವೆಚ್ಚ ಕೊಡೋರು ಯಾರು? ಅದಲ್ದೆ, ಬಂದ್ಮೇಲೆ ಅವರ ಸಾಹಿತ್ಯ ಭಾಷಣ ಕೇಳೋ ಜನರಾದ್ರೂ ಬೇಡ್ವೆ?”

“ಅಂಥವರಲ್ಲ ಸಾರ್, ಯುವಕ ಸಾಹಿತಿಗಳು ಯಾರನ್ನಾದರೂ-”

"ಪ್ರಗತಿಶೀಲ ಸಾಹಿತಿಗಳೇನ್ರಿ?"--ಎಂದು ನಂಜುಂದಯ್ಯ ವ್ಯಂಗ್ಯವಾಗಿ ನಕ್ಕು ಕೇಳಿದರು.