ಪುಟ:Duurada Nakshhatra.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಯಾಕ್ಸಾರ್ – ಜನರಾಜರನ್ನೋ ಕೃಷ್ಣರಾಜರನ್ನೋ ಕರಿಸಿದ್ರಾಗ್ದೆ?”

“ಅವರು ಯಾರು ?"-ಎಂದು ವೆಂಕಟರಾಯರು ಬೇಕುಬೇಕೆಂಬುದೇ ಕೇಳಿದರು. ಅದು ವ್ಯಂಗ್ಯಮಿಶ್ರಿತ ಪ್ರಶ್ನೆ ಎಂಬುದು ಜಯದೇವನಿಗೆ ಹೊಳೆಯದಿರಲಿಲ್ಲ, ಮಾತನಾಡಿ ಪ್ರಯೋಜನವಿಲ್ಲವೆಂದು ಆತ ಸುಮ್ಮ ನಾದ. ಅದನ್ನು ಗಮನಿಸಿ ನಂಜುಂಡಯ್ಯನೆಂದರು.

“ಸಾಹಿತಿಗಳು ಯಾರೂ ಬೇಡಿ. ನಮ್ಮ ಅಧಿಕಾರಿಗಳನ್ನೇ ಕರೆಸೋಣ..?

“ಯಾರನ್ನು--ರೇಂಜ್ ಇನ್ಸ್ಪೆಕ್ಟರ್ ರಾಧಾಕೃಷ್ಣಯ್ಯನವರ್ನ ಕರಿಸ್ತಿರೇನು ?'–ಎಂದು ಜಯದೇವ, ಅದಾದರೂ ಆಗಲಿ ಎಂಬ ಆಸೆಯಿಂದ ಹೇಳಿದ.

ವೆಂಕಟರಾಯರೂ ನಂಜುಂಡಯ್ಯನೂ ಪರಸ್ಪರ ಮುಖ ನೋಡಿಕೊಂಡರು.

“ರೇಂಜ್ ಇನ್ಸ್ಪೆಕ್ಟರು ಯಾತಕ್ರಿ ? ಜಿಲ್ಲಾ ಕೇಂದ್ರಕ್ಕೆ ಹೋಗಿ ಜಿಲ್ಲಾಧಿಕಾರಿಗಳನ್ನೇ ಕರಕೊಂಡು ಬರ್ತೀನಿ."

ಹಾಗೆ ಹೇಳಿದ ವೆಂಕಟರಾಯರು ಅದನ್ನು ಮಾಡಿಯೇ ತೀರುವರೆಂಬ ವಿಷಯದಲ್ಲಿ ಸಂದೇಹವಿರಲಿಲ್ಲ. ಆ ರೀತಿ ಜಯದೇವನ ಮನಸ್ಸನ್ನು ನೋಯಿಸಿದ ಮೇಲೆ, ಆ 'ಉತ್ಸಾಹಿ ಉಪಾಧ್ಯಾಯ'ರ ಸಾಮಾರ್ಥ್ಯಕ್ಕೆ ಆಹ್ವಾನ ನೀಡುವ ಬೇರೆ ಕೆಲಸವನ್ನು ಮುಖ್ಯೋಪಾಧ್ಯಾಯರು ಆತನಿಗೆ ಒಪ್ಪಿಸಿದರು.

“ಹುಡುಗರ್ದೊಂದು ನಾಟಕ, ಹುಡುಗೀರ್ದೊಂದು ನಾಟಕ-ಇಷ್ಟು ಜವಾಬ್ದಾರಿ ನಿಮ್ಮ ಮೇಲೆ.. ಏನು ಜಯದೇವ್ ?”

ಹೈಸ್ಕೂಲಿನಲ್ಲೆರಡು ಬಾರಿ, ಕಾಲೇಜಿನಲ್ಲೂ ಒಮ್ಮೆ, ನಾಟಕಗಳಲ್ಲಿ ಜಯದೇವ ಅಭಿನಯಿಸಿದ್ದ, ಆದರೆ, ಹುಡುಗ-ಹುಡುಗಿಯರನ್ನು ಕಲೆ ಹಾಕಿ ನಟನಟಿಯರನ್ನು ಸಿದ್ಧಗೊಳಿಸಿದುವುದು ಸುಲಭದ ಕೆಲಸವಾಗಿರಲಿಲ್ಲ.

“ಪ್ರಯತ್ನಪಟ್ಟು ನೋಡ್ತೀನಿ ಸಾರ್.”

ಜಯದೇವನ ಈ ಅಳಕು ಕಂಡು ವೆಂಕಟರಾಯರಿಗೆ ಸಂತೋಷವಾಯಿತು.