ಪುಟ:Duurada Nakshhatra.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮಯ್ಯ ಮೇಷ್ಟ್ರು ಮಾತನಾಡಲಿಲ್ಲ.

“ಕೃಷ್ಣಪ್ರೇಮ.. ಯಾರು ಇದನ್ನು ಬರೆದದ್ದು ?"

ಆಗಲೂ ತಿಮ್ಮಯ್ಯ ಸುಮ್ಮನಿದ್ದರು. ಜಯದೇವ ಏನೂ ತಿಳಿಯದವನಂತೆ ಅವರ ಮುಖ ನೋಡಿದ. ಆ ಪ್ರಾಥಮಿಕ ಉಪಾಧ್ಯಾಯರ ಕಣ್ಣು ಗಳಲ್ಲಿ ತುಂಟತನದ ನಗೆಯಿತ್ತು.

“ಬೇರೆ ಯಾರೋ ಬರೆದಿದ್ದು ಬೇಕಾದ್ರೆ, ನನ್ಹತ್ರ ಬರಬೇಕಾಗಿತ್ತೆ ಸ್ವಾಮಿ ನೀವು ?”

ಜಯದೇವನಿಗೆ ಆಶ್ಚರ್ಯವಾಯಿತು:

“ನೀವೆ ಬರೆದ್ರಾ ಇದನ್ನ ?

“ಸಂಶಯವೋ?”

ಸಂಶಯವಿರಲಿಲ್ಲ. ತಿಮ್ಮಯ್ಯನವರನ್ನು ಕಾಣಲು ಹೋದ ದಿನ ಅವರ ಮುಖ್ಯೋಪಾಧ್ಯಾಯರು ಹೇಳಿದ್ದಿಲ್ವೆ? 'ನಾಳೆ ಶಾಲೆಗೆ ನೀವು ಚಕ್ಕರ್– ಹಾಗಾದ್ರೆ, ' ಆಸಾಮಿ, ಹಳ್ಳಿಯಲ್ಲಿ ಮನೆಯಲ್ಲೇ ಕುಳಿತು ಬರೆದಿರ್ಬೇಕು!

“ಓದಿ ನೋಡಿ. ಸಾಯಂಕಾಲ "

“ಕಾಫಿ ತಗೊಳ್ಳೋಣ.”

“ಸಾಯಂಕಾಲ. ಬರೇ ಕಾಫಿಯಲ್ಲ-ತಿಂಡೀನೂ ಬೇಕು, ನಾಟಕ ಚೆನಾಗಿದ್ರೆ.”

ಅದು ಚೆನಾಗಿರುತ್ತದೆಂಬ ನಂಬಿಕೆಯೇನೂ ಜಯದೇವನಿಗೆ ಇರಲಿಲ್ಲ ಆದರೂ ಓದಲು ಮೊದಲು ಮಾಡಿದ, ಓದುತ್ತ ಬೆರಗಾದ. ಹಳೆಯ ನಾಟಕ ಗಳ ಶೈಲಿಯಿತ್ತು, ಒಂದು ತೂಕ ಹೆಚ್ಚಾಗಿಯೇ ಇದ್ದ ಪ್ರಾಸಪ್ರಿಯತೆ. ನಡು ನಡುವೆ ಲಲಿತವಾದ ಹಾಡುಗಳು. ಆ ಹಾಡುಗಳಿಗೆ ಸ್ವರಪ್ರಸ್ತಾರ. ಕಥಾವಸ್ತು ಕೃಷ್ಣ-ರಾಧೆಯರ ಪ್ರೇಮಕ್ಕೆ ಸಂಬಂಧಿಸಿದ್ದು, ರಂಗಭೂಮಿಯ ಮೇಲೆ ಅದು ಅಭಿನಯಿಸಲ್ಪಡುತ್ತಿದ್ದಂತೆಯೇ ಚಿತ್ರಿಸಿಕೊಂಡು ಜಯದೇವ ಓದಿದ. ಅವನಿಗೆ ಸಮಾಧಾನವಾಯಿತು: ತೃಪ್ತಿಯಾಯಿತು. ದೋಷಗಳಿದ್ದರೂ ಕೃತಿ ಸುಂದರವಾಗಿತ್ತು, ನಾಲ್ವತ್ತೈದು ನಿಮಿಷಗಳ ನಾಟಕ. ತಿಮ್ಮಯ್ಯನವರಲ್ಲಿ ಅಂಥ ಸಾಮರ್ಥ್ಯ ಹುದುಗಿರಬಹುದೆಂದು ಜಯದೇವ ಊಹಿಸಿಯೇ ಇರಲಿಲ್ಲ.