ಪುಟ:Duurada Nakshhatra.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕತ್ತಲೆಯ ಬೀದಿಯಲ್ಲಿ ನಡೆಯುತ್ತಿದಾಗ, ನಾಟಕಗಳು ಚೆನ್ನಾಗಿದ್ದುವೆಂದು ಶ್ಯಾಮಲೆಯ ತಾಯಿ ಮುಕ್ತಕಂಠದಿಂದ ಹೊಗಳಿದರು. ಆ ಕತ್ತಲಲ್ಲೂ ಸ್ಯಾಮಲ ತನ್ನನ್ನು ನೋಡುತ್ತಿದ್ದಂತೆ ಜಯದೇವನಿಗೆ ಭಾಸವಾಯಿತು. ಗಾಳಿ ಬೀಸುತಿರಲಿಲ್ಲ, ಆದರೆ ಶಾಮಲೆಯ ಸೀರೆಯು ಸೆರಗು ಜಯದೇವನಿಗೆ ತಗಲಿತು, ಜಯದೇವನ ಮೈ ತಣ್ಣಗಾಗಿ ಆತ ದೂರ ಸರಿದ.

ಮನೆಯ ಬಳಿ ಮೆಟ್ಟಿಲೇರುತಿದ್ದಾಗ ಶ್ಯಾಮಲಾ “ಅವ್ವಯ್ಯಾ!" ಎಂದು ಕಾಲು ಜಾರಿ ಹಿಂದಕ್ಕೆ ವಾಲಿದಳು.

“ಮೆತ್ತಗೆ-ಹುಷಾರಿ !” ಎಂದ ಜಯದೇವ, ಶ್ಯಾಮಲೆಯೇನೋ ಚೇತರಿಸಿಕೊಂಡಳು. ಆದರೆ ಬೀಳುವುದನ್ನು ತಡೆಯಲೆಂದು ನೀಡಿದ್ದ ಆತನ ಕೈ ಅವಳದನ್ನು ಸೋಕಿತು. ಎಷ್ಟೊಂದು ಬೆಚ್ಚಗಿನ ಸ್ಪರ್ಶ!

ಡವಡವನೆ ಹೊಡೆದುಕೊಳ್ಳುತ್ತಿದ್ದ ಎದೆಯೊಡನೆ ಜಯದೇವ ತನ್ನ ಕೊಠಡಿಗೆ ಓಡಿದ. ದೀಪವನ್ನೂ ಉರಿಸದೆ ಹಾಸಿಗೆಯ ಮೇಲುರುಳಿಕೊಂಡ. 'ಊಂ ಊಂ' ಎಂದು ನರಳಾಟದ ಸ್ವರ ಹೊರಟಿತು, ಸುನಂದಾ ಸುನಂದಾ' ಎಂದು ಆತ ತೊದಲಿದ.