ಪುಟ:Duurada Nakshhatra.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫

ಅನಾರೋಗ್ಯದಿಂದ ಜಯದೇವ ಬಳಲಿದ. ಅದು ಮನಸಿನ ಕಾಹಿಲೆ. ಆ ಎಳೆಯ ಜೀವನದಲ್ಲಿ ಆವರೆಗೂ ಆಗದೇ ಇದ್ದ ಪ್ರಬಲ ಮನೋ ವಿಕಾರಗಳು ಆತನನ್ನ ಬಾಧಿಸಿದುವು. ತನ್ನ ಪ್ರೌಢಾವಸ್ಯೆಯನ್ನು ಸಾಧಿಸ ಹೊರಟಿದ್ದ ಯಾವನ, ಯಾವುದು ಸರಿ? ಯಾವುದು ತಪ್ಪು? ಎಂದು ಬಾರಿಬಾರಿಗೂ ಕೇಳುತ್ತಿತ್ತು, ಶ್ಯಾಮಲೆ ಕೆಟ್ಟವಳು ಎಂದು ಒಮ್ಮೊಮ್ಮೆ, ಆತನಿಗೆ ಅನಿಸುವುದು. ಹಾಗೆ ಭಾವಿಸಬಾರದು; ದೃಷ್ಟಿ ಕೆಟ್ಟಿರುವುದು ತನಗೆ; ಮಾನವ ಸಹಜವಾದ ಸ್ನೇಹ-ಸರಸವನ್ನು ತೋರಿದ ಮಾತ್ರಕ್ಕೆ ಆ ಹುಡುಗಿಯನ್ನು ಕೆಟ್ಟವಳೆನ್ನಬೇಕೆ? – ಎಂದೂ ತೋರುವುದು. ವಿವೇಕದ ಕಣ್ಣು ತಪ್ಪಿಸಿ, ದೇಹದ ಬಯಕೆ ಹೊರಗೆ ಹರಿದಾಡಲೆತ್ನಿಸುತ್ತಿತ್ತು, ಆದರೆ ಹೃದಯ ಅರಚುತ್ತಲೇ ಇತ್ತು: 'ನಾನು ಇಲ್ಲಿಲ್ಲ, ನನಗಿದೊಂದೂ ತಿಳಿಯದು. ನನ್ನ ಸಾನ ಬೆಂಗಳೂರು.'

ರಾತ್ರೆ ಹೊತ್ತು ಹಾಸಿಗೆಯಲ್ಲಿ ಹೊರಳಿ ಹೊರಳಿ ನಿದ್ದೆ ಮಾಡಿದರೂ ಬೆಳಗ್ಗೆ ಎದ್ದಾಗ, ಜಾಗರವಿದ್ದವರ ಹಾಗೆ ಕಣ್ಣುಗಳು ಉರಿದು ಕೆಂಪಗಾಗುತಿದ್ದುವು.

ನಾಗರಾಜ ಕೇಳಿದ :

“ಮೈ ಚೆನಾಗಿಲ್ವೆ?”

ವಾರ್ಷಿಕೋತ್ಸವದ ಸಂದರ್ಭದಿಂದ ಆತ್ಮೀಯರಾಗಿದ್ದ ತಿಮ್ಮಯ್ಯ ಮೇಷ್ಟ್ರು ಬಂದು ಕೇಳಿದರು :

“ಮೈ ಚೆನ್ನಾಗಿಲ್ವೆ?"

ಬೇರೆ ಹಲವರೂ ಅದೇ ಪ್ರಶ್ನೆ ಕೇಳಿದರು. ಜಯದೇವ ಬೇರೆಬೇರೆ ಮಾತುಗಳಲ್ಲಿ ಒಂದೇ ರೀತಿಯ ಉತ್ತರವನ್ನು ಕೊಡುತ್ತ ಬಂದ:

'ಚೆನಾಗಿಲ್ದೆ ಏನು?' 'ಚೆನ್ನಾಗೇ ಇದೀನಲ್ಲ?' 'ಛೆ! ಛೇ! ಹಾಗೇನೂ ಇಲ್ಲ.'

ಯಾರಾದರೊಬ್ಬರು ಕೇಳುತ್ತಿದ್ದರು :

“ಕಣ್ಣು ಕೆಂಪಗಿದೆ. ರಾತ್ರೆ ನಿದ್ದೆ ಇರ್ಲಿಲ್ವೇನು?”