ಪುಟ:Duurada Nakshhatra.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಸ್ವಲ್ಪ ಜಾಸ್ತಿಹೊತ್ತು ಓದ್ತಾ ಕೂತಿದ್ದೆ, ಅಷ್ಟೆ.”

ಆಗ ಯಾರಾದರೂ ನಕ್ಕು ಹೇಳುತಿದ್ದರು :

“ದೊಡ್ಡ ಪರೀಕ್ಷೆ ಸಮೀಪವಾಗ್ತೀರೋದು ಹುಡುಗರಿಗೆ ಸಾರ್! ನೀವ್ಯಾಕೆ ಓದ್ತೀರಾ?'

ದೊಡ್ಡ ಪರೀಕ್ಷೆ, ಅದರಲ್ಲಿ ಸಂದೇಹವೇ ಇರಲಿಲ್ಲ, ಎಲ್ಲರೂ ಅಂತಹ ಪರೀಕ್ಷೆಗೆ ಬೇಗನೆ ಇಲ್ಲವೆ ತಡವಾಗಿ ಕುಳಿತುಕೊಳ್ಳల్వేటిలేు. ದುರ್ಬಲರಿಗೆ ಸೋಲು. ಹೃದಯ-ಮೆದುಳುಗಳನ್ನು ಒಂದಾಗಿ ಇರಿಸಿ ದೇಹದ ಮೇಲೆ ಸಂಪೂರ್ಣ ಒಡೆತನವಿರುವವರಿಗೆ ಗೆಲುವು.

ಸೋಲುವ ಇಷ್ಟವಿರಲಿಲ್ಲ ಜಯದೇವನಿಗೆ.

ಶ್ಯಾಮಲೆಗೆ ಏನಾಗಿತ್ತು? ಅತೃಪ್ತ ಗ್ರಹಜೀವನದ ಕೊರತೆಯನ್ನು ಒಳ್ಳೇಯವನೊಬ್ಬನ ಸಾಮಿಪ್ಯದಿಂದ ನೀಗಿಸಿಕೊಳ್ಳಲು ಆಕೆ ಇಚ್ಛಿಸಿದಳು. ಕಾಮದ ವಿಕೃತ ದೃಷ್ಟಿಯಿಂದಲೇ ಆಕೆ ಬದುಕನ್ನು ನೋಡುತ್ತಿರಲಿಲ್ಲ. ಆದರೆ ನಿರ್ದಿಷ್ಟವಾಗಿ ತನಗೇನು ಬೇಕೆಂಬುದು ಆಕೆಗೇ ತಿಳಿದಿರಲಿಲ್ಲ, ಅಸ್ಪಷ್ಟ ಆಸೆಗಳ ಕತ್ತಲಲ್ಲಿ ಹುಡುಗಿ ಎಡವಿ ನಡೆಯುತಿದ್ದಳು..

ಮನಸ್ಸಿನ ಹೊಯ್ದಾಟದ ನಿಜರೂಪವನ್ನು ತಿಳಿದುಕೊಳ್ಳಲು ಜಯದೇವ ಸಮರ್ಥನಾಗಲಿಲ್ಲ.......

ಹದಿನೈದು ದಿನ ಸಂಕಟ ಅನುಭವಿಸಿದ ಬಳಿಕ ಜಯದೇವ ಕೊನೆಯ ತೀರ್ಮಾನಕ್ಕೆ ಬಂದ-ಕೊಠಡಿ ಬದಲಾಯಿಸುವ ತೀರ್ಮಾನ.

ಆನಂದವಿಲಾಸದ ಯಜಮಾನರನ್ನು ಬಿಟ್ಟರೆ ಬೇರೆ ಹಾದಿ ಇರಲಿಲ್ಲ. ಹೋಟೆಲಿಗೆ ತಾಗಿಯೆ, ಗಂಡಸರ ವಾಸಕ್ಕೆ ಯೋಗ್ಯವಾಗಿದ್ದ ಮೂರು ಕೊಠಡಿಗಳಿದುವು. ಅವುಗಳಲ್ಲೊಂದು ಖಾಲಿ ಇತ್ತು.

“ಬಾಡಿಗೆ ಜಾಸ್ತಿಯಾಗುತ್ತಲ್ಲ ಮೇಷ್ಟ್ರೇ.”

“ಎಷ್ಟು?"

“ಹನ್ನೊಂದುರೂಪಾಯಿ.”

“ಬೆಂಗಳೂರು ಬಾಡಿಗೆಯಾಯ್ತಲ್ರಿ!”

“ಏನು ಮಾಡ್ಲಿ ಹೇಳಿ ? ನೀವು ಈ ಊರಿಗೆ ಬಂದಾಗ್ಲೆ ಇಲ್ಲಿಗೆ ಕರೆಯೋಣಾಂತಿದ್ದೆ, ಆದರೆ ನಿಮಗೆ ಬಾಡಿಗೆ ಜಾಸ್ತಿಯಾಗುತ್ತೇಂತ—”