ಪುಟ:Duurada Nakshhatra.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ತಂದೆ ಅಮ್ಮ ಎಂದುದು ತನ್ನ ಎರಡನೆಯ ಹೆಂಡತಿಯನ್ನುದ್ದೇಶಿಸಿ... ವಾಸ್ತವವಾಗಿ ಹಿರಿಯ ಮಗನೊಡನೆ ಇನ್ನೂ ಒಂದಷ್ಟು ಮಾತನಾಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. ಮಗಳ ಮದುವೆಯ ಜತೆಯಲ್ಲೇ ಜಯದೇವನಿಗೂ ಒಂದು ಹೆಣ್ಣು ತಂದುಬಿಡಬೇಕೆಂದು ಆತ ಆಶಿಸಿದ್ದ. ಆದರೆ ಮನೆಯಾಕೆ ಸೊಸೆಯನ್ನು ತರುವ ವಿಷಯವಾಗಿ ಉತ್ಸುಕಳಾಗಿರಲಿಲ್ಲ. ಆ ಕಾರಣದಿಂದ ಮಗನೊಡನೆ ಅದರ ಪ್ರಸ್ತಾಪ ಮಾಡುವ ಧೈರ್ಯ ಆ ತಂದೆಗಿರಲಿಲ್ಲ.

ಅಡುಗೆ ಮನೆಗೆ ಹೋಗಿ ಬಾಗಿಲಲ್ಲೆ ನಿಂತು ಜಯದೇವ ಹೇಳಿದ.

"ಅಮ್ಮ, ಇವತ್ತು ಸಾಯಂಕಾಲದ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗ್ತೀನಿ."

"ಎರಡು ದಿವಸ ಇದ್ದು ಹೋಗಬಾರದೇನೋ" ಎಂದು ಆಕೆಯೂ ಧ್ವನಿ ತೆಗೆದಳು.

"ಇಲ್ಲ ಅಮ್ಮ. ಅಲ್ಲಿಂದ ಹೊರಡೋ ತಯಾರೀನೂ ಮಾಡ್ಬೇಕಲ್ಲ. ಆ ಮೇಲೆ ತಡವಾಗುತ್ತೆ."

"ಹೂನಪ್ಪಾ ಹಾಗಾದರೆ. ನಾನು ಇರೂ ಅಂದರೂ ಯಾಕೆ ಕೇಳ್ತೀಯ ನೀನು?"

"ಹಾಗಲ್ಲಮ್ಮ--"

ಏನೋ ನೆನಪಾಗಿ ಆ ತಾಯಿ, ಮಗಳನ್ನು ಕರೆದಳು.

"ಸಾಯಂಕಾಲ ಹೊರಡ್ತಾನಂತಲ್ಲೇ ನಿಮ್ಮಣ್ಣ. ತಿಂಡಿಗಿಂಡಿ ಏನೇನಿದೆಯೋ ಅದನ್ನೆಲ್ಲಾ ಇಷ್ಟಿಷ್ಟು ಕಟ್ಕೊಡು."

ಆ ತಂಗಿಯನ್ನು ಕಂಡಾಗಲೆಲ್ಲ ಜಯದೇವನಿಗೆ ತನ್ನ ತಾಯಿಯ ನೆನಪಾಗುತಿತ್ತು. ಆಕೆ ಇದ್ದು ಮತ್ತೊಂದು ಹೆಣ್ಣು ಹೆತ್ತಿದ್ದರೆ, 'ತನ್ನ' ತಂಗಿಯೇ ಒಬ್ಬಳು ದೊರೆಯುತಿದ್ದಳಲ್ಲವೆ?

ಹಲವು ವರ್ಷಗಳ ಕಾಲ ತಾನು ಮನೆಯ ಪಾಲಿಗೆ ಹೊರ ಹೊರಗಿನವನಾಗಿಯೇ ಇದ್ದ ಕಾರಣವೋ ಏನೋ, ಈ ತಂಗಿ ಮತ್ತು ಜಯದೇವನ ನಡುವೆ ಗಾಢವಾದ ಆತ್ಮೀಯತೆ ಬೆಳೆದು ಬಂದಿರಲಿಲ್ಲ. ದೊಡ್ಡಣ್ಣನಾದ ಜಯದೇವ ಮನೆಗೆ ಬಂದಾಗ, ಆತನೊಡನೆ ಬೆಂಗಳೂರಿನ ಚಲಚ್ಚಿತ್ರಗಳ ವಿಷಯ ಆಕೆ ಚರ್ಚಿಸುವುದಿತ್ತು. ಜಯದೇವ ಆಗಾಗ್ಗೆ ಒಳ್ಳೆಯ ಚಲ