ಪುಟ:Duurada Nakshhatra.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚ್ಚಿತ್ರಗಳನ್ನು ನೋಡುತ್ತಿದ್ದನಾದರೂ ಎಲ್ಲ ಪ್ರಶ್ನೆಗಳಿಗೂ ಉತ್ತರವೀಯುವಷ್ಟು ಜ್ಞಾನಿಯಾಗಿರಲಿಲ್ಲ. ಕೆಲವು ವಿಷಯಗಳಲ್ಲಿ ಆತನಿಗಿಂತಲೂ ಆಕೆಗೇ ಹೆಚ್ಚು ಮಾಹಿತಿ ತಿಳಿದಿರುತಿತ್ತು. "ಇವೆಲ್ಲಾ ಎಲ್ಲಿಂದ ತಿಳಕೊಂಡ್ಯೇ?"ಎಂದು ಕೇಳಿದರೆ, ಸಣ್ಣಣ್ಣ ಮನೆಗೆ ತರುತಿದ್ದ ವಾರಪತ್ರಿಕೆಯನ್ನು ಆಕೆ ತೋರಿಸುತಿದ್ದಳು. ವಾರ ಪತ್ರಿಕೆಗಳಲ್ಲಿ ಸಾಹಿತ್ಯ ವಿಷಯಕವಾದ ಲೇಖನಗಳನ್ನೇ ಹೆಚ್ಚು ಆಸಕ್ತಿಯಿಂದ ಓದುತಿದ್ದ ಜಯದೇವನಿಗೆ ತನ್ನ ಚಲಚಿತ್ರಜ್ಞಾನ ಕಡಮೆಯೇ ಎನಿಸುತ್ತಿತ್ತು.

ಅಮ್ಮನಿಗೆ ಹೇಳಿದಂತೆ, ಹೊರಡುವ ತಯಾರಿಯೇ ಮುಖ್ಯವಾಗಿದ್ದುದರಿಂದ ಜಯದೇವ ಆ ಸಂಜೆಯೆ ಬೆಂಗಳೂರಿಗೆ ಹೊರಟನೆ?

ಅದು ನಿಜವಾಗಿರಲಿಲ್ಲ.

ಬೆಂಗಳೂರು ಆತನ ಪ್ರೀತಿಯ ಊರು. ಬೆವರು ಹನಿಗಳನ್ನು ಮೂಡಿಸಿ ಮುಖದ ಬಾಲಮುಗ್ಧತೆಯನ್ನು ಅಳಿಸಿ, ಆತ್ಮಾವಲಂಬನದ ಗಾಂಭೀರ್ಯದ ಒಪ್ಪವಿಟ್ಟ ಮಹಾನಗರ. ಕಾಲು ನಡಿಗೆಯಲ್ಲೇ ಸಹಸ್ರಸಾರೆ ಎಷ್ಟೊಂದು ಬೀದಿಗಳನ್ನು ಆತ ಸುತ್ತಿದ್ದ! ಆತನಿಗೆ ವಿದ್ಯಾದಾನ ಮಾಡಿದ್ದ ಫೋರ್ಟ್ ಹೈಸ್ಕೂಲು-ಇಂಟರ್ ಮೀಡಿಯೆಟ್ ಕಾಲೇಜು; ಪ್ರೀತಿಯ ಅಧ್ಯಾಪಕರು, ಪ್ರಾಧ್ಯಾಪಕರು...ಆ ಸಂಬಂಧಗಳನ್ನೆಲ್ಲ ತೊರೆದು ದೂರದ ಊರಿಗೆ ಹೊರಟು ಹೋಗುವುದು ಸುಲಭವಾಗಿರಲಿಲ್ಲ.

ಆ ಒಂದು ವರ್ಷ ತಾನು ಪಾಠಹೇಳಿಕೊಟ್ಟಿದ್ದ ಎರಡು ಮನೆಗಳ ನಾಲ್ವರು ಹುಡುಗರು. ಆ ರಜಾ ದಿನಗಳಲ್ಲಿ ಪಾಠವಿರೊಲ್ಲ ನಿಜ. ಆದರೂ ಜಯದೇವನನ್ನು ಹುಡುಕಿಕೊಂಡು ಹುಡುಗರು ಆತನ ಕೊಠಡಿಗೆ ಬರುತಿದ್ದರು. ಆ ಹರಟೆ, ಹುಡುಗರೊಡನೆ ಸಂಜೆ ವಾಯುವಿಹಾರ ಅವನಿಗೆ ಪ್ರಿಯವಾಗಿದ್ದುವು.

ಮೊದಲು ಬೆಂಗಳೂರಿಗೆ ಬಂದಾಗ ತಾನು ಅಡುಗೆಯವನಾಗಿದ್ದ ದೂರದ ಸಂಬಂಧಿಕರ ಸಂಬಂಧ ಈಗೇನೂ ಉಳಿದಿರಲಿಲ್ಲ. ಆದರೆ ಹೈಸ್ಕೂಲು ಅಧ್ಯಯನದ ದಿನಗಳಲ್ಲೆ ಜಯದೇವನಿಗೆ ಬೇರೊಂದು ಮನೆಯ ಪರಿಚಯವಾಗಿತ್ತು. ಅದು ಸಹಪಾಠಿ ವೇಣುಗೋಪಾಲನ ಮನೆ. ವೇಣುವಿನ ತಾಯ್ತಂದೆಯರು ತಮ್ಮ ಮಗನ ಸ್ನೇಹಿತನನ್ನು ಮನೆಯವನಾಗಿಯೇ ಕಂಡರು.