ಪುಟ:Duurada Nakshhatra.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಾಕಿತು, ಜಯದೇವನ ಮೈ ಬೆವರೊಡೆಯಿತು. ಎರಡನೆಯ ಸಾಲಿ ನಲ್ಲಿದ್ದ ಎಳೆಯ ಮಗುವೊಂದು ರುಯ್ಯೋ ಎಂದು ಅಳತೊಡಗಿತು. ಮಾರ್ಗದಲ್ಲಿದ್ದೊಂದು ತಗ್ಗನ್ನು ದಾಟುವ ಗದ್ದಲದಲ್ಲಿ ಮೋಟಾರು ಏರಿ ಇಳಿದಾಗ ಹಿಂದಿನ ಭಾಗದಲ್ಲಿದ್ದವರೊಬ್ಬರು ಯಾರೋ ಹಿಂದೂಸ್ಥಾನೀ ಭಾಷೆಯಲ್ಲಿ ಏನೋ ಕೆಟ್ಟ ಮಾತೆಂದರು. ಇನ್ನೊಬ್ಬರು ಖೋ ಖೋ ಎಂದು ನಕ್ಕರು. ಒಬ್ಬ ಬೀಡಿಯನ್ನು ಬಾಯಿಗಿಟ್ಟ ಕಡ್ಡಿಗೀರಿದ. ಕಂಡಕ್ಟರೆಂದ:

“ಯಾರ್ರೀ ಅದು? ಸೇದ್ಬೇಡ್ರೀ... ಬೋರ್ಡು ಕಾಣೋಲ್ವೇನ್ರಿ?

“ಬೋರ್ಡು!” ಎಂದು ಯಾರೋ ಅಣಕಿಸುವ ಧ್ವನಿಯಲ್ಲಿ ಅಂದರು.

ಇನ್ನೊಬ್ಬ ಸಿಗರೇಟು ಹೊರತೆಗೆದ.

“ಇದೇನು ಸರಕಾರಿ ಬಸ್ಸು ಕೆಟ್ಟೋಯ್ತೆ? ಬೆಂಕಿಪೊಟ್ಣ ಕೊಡ್ರೀ ಇಲ್ಲಿ ಸ್ವಲ್ಪ."

ಬೇಡವೆಂದರೂ ಜಯದೇವನ ಕಿವಿಗಳಿಗೆ ಈ ಮಾತುಗಳೆಲ್ಲ ಬಂದು ತಾಕುತ್ತಿದುವು. ದೇಹಕ್ಕೂ ಮೆದುಳಿಗೂ ಆಯಾಸವಾದಹಾಗೆ ತೋರಿತು. ತೂಡಿಕೆ ಬಂತು...ಅದೆಲ್ಲಾ ನಿಮಿಷ ನಿದ್ದೆ. ಎಚ್ಚರ, ನಿದ್ದೆ, ಎಚ್ಚರ.

ಅಷ್ಟರಲ್ಲೆ ಊರು ಸಮೀಪಿಸಿತು. ಒಂದು ಘಂಟೆಯ ಪ್ರಯಾಣ. ಒಂಭತ್ತೂವರೆ ಆಗಿರಬೇಕು ಆಗ.

ಅಲ್ಲೇ, ಕಲ್ಲಿನ ಹಲಿಗೆಯಮೇಲೆ ಊರಿನ ಹೆಸರನ್ನು ಕೊರೆದು ಬರೆದಿದ್ದರು. ಜಯದೇವ, ಬದುಕಿನ ಹೊಸತೊಂದು ಅಧ್ಯಾಯವನ್ನು ಆರಂಭಿಸಬೇಕಾದ ಊರು. ತಕ್ಕಮಟ್ಟಿಗೆ ವಿಶಾಲವಾಗಿಯೇ ಇದ್ದ ನಿಲ್ದಾಣದಲ್ಲಿ ಬಸ್ ನಿಂತಿತು. ಬರುತ್ತೇನೆಂದು ಯಾರಿಗೂ ಜಯದೇವ ಬರೆದಿರಲಿಲ್ಲ. ಆದರೂ ಬಸ್ಸಿನಿಂದಿಳಿಯುತ್ತ ದೃಷ್ಟಿ ಅತ್ತಿತ್ತ ಓಡಾಡಿತು. ಎಷ್ಟು ನೋಡಿದರೇನು? ಅಪರಿಚಿತ ಊರಿನಲ್ಲಿ ಪರಿಚಿತ ಮುಖ ಎಲ್ಲಿಂದ ಕಾಣಿಸಬೇಕು?

ಜಯದೇವ, ಹಾಸಿಗೆ-ಚೀಲ ಮತ್ತು ತನ್ನ ಉಡುಗೆಯಿಂದ ಧೂಳು ಜಾಡಿಸಿದ. ಆ ನಿಲ್ದಾಣದಲ್ಲೂ ಉಡುಪಿಮಾವನ ಒಂದು ಹೋಟಲಿತ್ತು. ನೀರು ಕೇಳಿ ಇಸಗೊಂಡು ಮುಖ ತೊಳೆದ. ಒಂದು ಕಪ್ ಕಾಫಿ ಕುಡಿದ.

ದಣುವಾರಿದಾಗ ಜಯದೇವ ಕಾಫಿ ಕೊಟ್ಟ ಹುಡುಗನನ್ನು ಕೇಳಿದ;

“ಏನಪಾ, ಇಲ್ಲಿ ಮಾಧ್ಯಮಿಕ ಶಾಲೆ ಎಲ್ಲಿದೆ?”

ಬೆರಗಾದವನಂತೆ ಕ್ಷಣ ಹೊತ್ತು ನಿಂತ ಆ ಹುಡುಗ.