ಪುಟ:Duurada Nakshhatra.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಖ್ಯೋಪಾಧ್ಯಾಯರಿರಬಹುದೆ? ಸ್ವತಃ ಮುಖ್ಯೋಪಾಧ್ಯಾಯರೇ ಹೊರ ಬಂದು ತಾವೇ ಮೊದಲು ತನಗೆ ನಮಸ್ಕರಿಸಿದರೆ?

ಆ ಯೊಚನೆಯಿಂದಲೆ ಜಯದೇವನ ಮುಖ ಕೆಂಪಗಾಯಿತು.

“ಇವರ ಸಾಮಾನು ಆಫೀಸು ರೂಮ್ನಲ್ಲಿ ಇಡಪ್ಪ.”

–ಒಬ್ಬ ಹುಡುಗನಿಗೆ ಅವರೇ ಕೊಟ್ಟ ನಿರ್ದೇಶ.

- ಜಯದೇವ ಜುಬ್ಬದ ಜೇಬಿನಿಂದ ಕರವಸ್ತ್ರ ಹೊರತೆಗೆದು ಮುಖ ಒರೆಸಿಕೊಂಡು ಹೇಳಿದ:

"ನಾನು ಬೆಂಗಳೂರಿಂದ ಬಂದಿದೀನಿ.”

“ಗೊತ್ತು ಮಿ. ಜಯದೇವ–ಅಲ್ವೆ? ಅನುಜ್ಞೆಯ ಪ್ರತಿ ಆವತ್ತೆ ಬಂತು.”

“ಹೆಡ್ಮೇಷ್ಟ್ರು–”

“ನಾನೇ, ರಂಗರಾವ್ ಅಂತ. ಒಳಗ್ಬನ್ನಿ ಮಿ. ಜಯದೇವ್.”

ಜಯದೇವ ನಿರೀಕ್ಷಿಸಿದ್ದುದಕಿಂತಲೂ ನೂರುಪಾಲು ಮಿಗಿಲಾಗಿತ್ತು ಮುಖ್ಯೋಪಾಧ್ಯಾಯರು ತೋರಿದ ಆತ್ಮೀಯತೆ. ಆತನ ಹೃದಯ ಪ್ರಸನ್ನವಾಯಿತು. ಪಯಣದ ಯವ ಬಳಲಿಕೆಯೂ ಉಳಿಯಲಿಲ್ಲ.

ಪುಟ್ಟ ಮೇಜು, ಆದರ ಸುತ್ತಲೂ ನಾಲ್ಕು ಬಡಕಲು ಕುರ್ಚಿಗಳು. ಮುಖ್ಯ ಕುರ್ಚಿಯ ಹಿಂದೆ ಗೋಡೆಯ ಮೇಲೆ, ಅವಿಭಕ್ತ ಇಂಡಿಯಾದೇಶದ ಹಳೆಯ ನಕಾಶೆಯೊಂದು [ಭಾರತ ಸ್ವತಂತ್ರವಾಗಿದ್ದರೇನಂತೆ?] ತೂಗಾಡುತಿತ್ತು, ಯಾವು ಯಾವುದೋ ಪುಸ್ತಕಗಳು ತುಂಬಿದೊಂದು ಕಪಾಟ. ಅದರ ಗಾಜುಗಳು ಒಡೆದಿದ್ದುವು. ಮೇಲುಗಡೆ, ರಾಜದಂಡವನ್ನು ಹಿಡಿದ ಪಂಚಮ ಜಾರ್ಜರ ಹಳೆಯ ಬಣ್ಣದ ಚಿತ್ರವಿತ್ತು; ಅದರ ಗಾಜೂ ಒಡೆದಿತ್ತು. ಸಾಂಕೇತಿಕವಾಗಿ ! ಇತ್ತ ಜಯಚಾಮರಾಜರು ಬಾಯ್ ಸ್ಕೌಟು ಆಗಿದ್ದಾಗ ತೆಗೆದ ಭಾವ ಚಿತ್ರ, ಬಾಗಿಲ ಮೇಲುಭಾಗದಿಂದ ಮಹಾತ್ಮಾಗಾಂಧಿಯವರೂ ಜವಹರಲಾಲರೂ ನಗುತ್ತಿದ್ದರು. ಬೆಂಗಳೂರು ಪ್ರೆಸ್ಸಿನ ಕ್ಯಾಲೆಂಡರೊಂದು ಜೂನ್ ತಿಂಗಳನ್ನು ಸೂಚಿಸುತಿತ್ತು.

“ಬನ್ನಿ ಜಯದೇವ್. ಇದೇ ನಮ್ಮ ಆಫೀಸು ರೂಮು. ಟೀಚರ್ಸ್ ರೂಮು ಇದೇ. ಬನ್ನಿ–ಕುಳಿತುಕೊಳ್ಳಿ.”