ಪುಟ:Duurada Nakshhatra.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಟಿಕ್-ಟಾಕ್ ಟೀಕ್-ಟಾಕ್...ಜಯದೇವ ತಲೆ ಎತ್ತಿ ನೋಡಿದ. ರಾಜಾಧಿರಾಜರ ಮೇಲೆ ಗೋಡೆಯಲ್ಲಿ, ಹಳೆಯಕಾಲದ ಹತ್ತುರೂಪಾಯಿಯ ಜಪಾನೀ ಗೋಡೆ ಗಡಿಯಾರವೊಂದಿತ್ತು. 'ನನ್ನನು ನೀನು ನೋಡಲೇ ಇಲ್ಲ' ಎಂದು ಮುನಿದುಕೊಂಡವರ ಹಾಗೆ ಜಯದೇವನನ್ನೆ ಅದು ನೋಡುತಿತ್ತು.

ಬೆಂಗಳೂರಿನಲ್ಲಿ ಅಂತಹ ನೋಟ ಸಿಗುವುದು ಸಾಧ್ಯವಿರಲಿಲ್ಲ. ಮಾದರಿ ಶಾಲೆಯೆಂದು ಬೋರ್ಡು ತಗಲಿಸಿ, ಒಳಗೆ ಹುಡುಗರನ್ನೆಲ್ಲ ನೆಲದ ಮೇಲೆ ಕುಳ್ಳಿರಿಸಿ ಕಿರಿಚಿಕೊಂಡು ಪಾಠ ಹೇಳುವುದಿರಬಹುದಾದರೂ ಇಲ್ಲಿದ್ದ ಈ ಗಡಿಯಾರ, ಪಂಚಮ ಜಾರ್ಜರು, ಈ ವಾತಾವರಣ...ಇದೊಂದೂ ಬೆಂಗಳೂರಿನಲ್ಲಿ ಹೀಗೆ ಇರಲಿಲ್ಲ.

“ಏನು, ಗಡಿಯಾರ ನೋಡ್ತಿದೀರಾ? ಅದು ಹದಿನೈದು ನಿಮಿಷ ಹಿಂದಿದೆ," ಎಂದರು ಮುಖ್ಯೋಪಾಧ್ಯಾಯರು.

ಜಯದೇವ ಉತ್ತರವೀಯದೆ ಸಣ್ಣನೆ ನಕ್ಕ. ಗಡಿಯಾರ ಒಂದೇ ಎಂದೇನು ? ಇಲ್ಲಿ ಎಲ್ಲವೂ ಹಿಂದಿದ್ದುವು-ಬಲು ಹಿಂದೆ. ಇಲ್ಲಿ ಯಾವುದೂ ಚಲಿಸುತಿದ್ದಂತೆಯೇ ತೋರಲಿಲ್ಲ. ಚಲಿಸಿದರೂ ಆ ಚಲನೆ ಬಲು ನಿಧಾನವಾಗಿತ್ತು.

'ಹೊಸಮೇಷ್ಟ್ರು' ಬಂದ ಸುದ್ದಿ ಶಾಲೆಯಲ್ಲೆಲ್ಲಾ ಹಬ್ಬಿತು. ವಿದ್ಯಾರ್ಥಿಗಳು ಇಲ್ಲದ ನೆಪ ಮಾಡಿಕೊಂಡು ಆಫೀಸು ರೂಮಿನ ಎದುರುಗಡೆಯಿಂದ ಹಾದುಹೋದರು. ಬಾಗಿಲ ಹೊರಗೆ ನಿಂತು ಬಾಗಿಬಾಗಿ ನೋಡಿದರು. ಜಯದೇವನ ಬೆನ್ನಷ್ಟೆ ಕಾಣಿಸುತಿತ್ತು ಆತ ಅತ್ತಿತ್ತ ತಿರುಗಿದನೆಂದರೆ ಮುಖವೂ ಕೂಡಾ... ಬಳೆಗಳ, ಕಿಸಕ್ಕನೆ ನಕ್ಕ, ಸದ್ದು. ಹುಡುಗಿಯರ ಗುಂಪೂ ಅತ್ತಿಂದಿತ್ತ ಹಾದು ಹೋಯಿತು. ಜಯದೇವ ಅವರನ್ನು ನೋಡಿದ: ಹಲವು ಲಂಗಗಳು, ಕೆಲವು ಸೀರೆಗಳು.

ರಂಗರಾಯರು ನಕ್ಕು ನುಡಿದರು.

“ಹೊಸಮೇಷ್ಟ್ರು ಬಂದಿದಾರೇಂತ ಹುಡುಗರೆಲ್ಲಾ ಖುಷೀಲಿದ್ದಾರೆ.”

-ಆದರೆ ನಾಳೆಯ ದಿನ ತಾನು ಪಾಠಹೇಳಲು ತೊಡಗಿದಾಗ, ಹುಡುಗರಿಗೆಲ್ಲಿ ನಿರಾಶೆಯಾಗುವುದೋ ಎಂದು ಜಯದೇವನಿಗೆ ಭಯವಾಯಿತು.

“ಬೆಂಗಳೂರೇ ನಿಮ್ಮ ಸ್ವಂತ ಊರೇನು?”