ಪುಟ:Duurada Nakshhatra.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದುಡಿಯಬೇಕಾದ ಆ ಇಬ್ಬರು ಉಪಾಧ್ಯಾಯರ ವಿಷಯವಾಗಿ ಹೆಚ್ಚು ತಿಳಿಯುವ ಕುತೂಹಲವೂ ಆಯಿತು. ಆದರೆ ಅಂಥದೆಲ್ಲ, ಕೇಳಿ ತಿಳಿದುಕೊಳ್ಳುವ ವಿಷಯಗಳಾಗಿರಲಿಲ್ಲ, ಸೂಕ್ಷ್ಮ ನಿರೀಕ್ಷಣೆಯೊಂದೇ ಅದಕ್ಕಿದ್ದ ಮಾರ್ಗ. ತಾನು ಮಾತಿನಲ್ಲಿ ಜಾಗರೂಕನಾಗಿರಬೇಕು; ಅಪ್ಪಿ ತಪ್ಪಿ ಆಡಬಾರದ್ದನ್ನು ಅನ್ನಬಾರದು-ಎಂದುಕೊಂಡ ಜಯದೇವ.

ಮುಖ್ಯೋಪಾಧ್ಯಾಯರು ಬೀರುವಿನಿಂದ ಒಂದೆರಡು ಪುಸ್ತಕಗಳನ್ನೂ ತಮ್ಮ ಮೇಜಿನೊಳಗಿಂದ ಚಾಕ್ ತುಂಡನ್ನೂ ಎತ್ತಿಕೊಂಡು ಅಂದರು:

“ಜಯದೇವ, ನೀವು ಬಂದಾಗ ಏನನ್ನೂ ಕೇಳಲೇ ಇಲ್ಲ, ಪ್ರಾತರ್ವಿಧಿ ಆಗಿದೆಯೇನು ?

“ಆಯಿತು. ಎರಡುಸಾರೆ. ಈ ಊರಿನ ಹೋಟೆಲು ದರ್ಶನವೂ ಆಯಿತು.”

“ಹಾಗಾದರೆ ಸರಿ. ಇವತ್ತೊಂದು ದಿವಸ ನಮ್ಮನೇಲೆ ಇದ್ದಿಡಿ; ಸಾಯಂಕಾಲವೋ ನಾಳೆಯೋ ಬೇರೆ ಏರ್ಪಾಟು ಮಾಡೋಣ. ಸಧ್ಯಃ ಮೂರು-ನಾಲ್ಕನೆ ತರಗತಿ ಹುಡುಗರ ಹಾಜರಿ ತಕ್ಕೊಂಡು ಒಂದಿಷ್ಟು ಲೆಕ್ಕ ಕೊಟ್ಟು ಬರ್ತೀನಿ. ಆ ಮೇಲೆ ಮನೆಗೆ ಹೋಗೋಣ.”

“ಆಗಲಿ ಸಾರ್."

ಒಬ್ಬನೇ ಉಳಿದ ಮೇಲೆ ಜಯದೇವ ಮತ್ತೊಮ್ಮೆ ಸೂಕ್ಷ್ಮವಾಗಿ ಆ ಕೊಠಡಿಯಲ್ಲಿದುದೆಲ್ಲವನ್ನೂ ಪರೀಕ್ಷಿಸಿದ. ಅದಿನ್ನು ತನ್ನ ಕೊಠಡಿಯೂ ಹೌದು... ಜಯದೇವ ಎದ್ದು, ಅತ್ತಿತ್ತ ಶತಪಥ ತಿರುಗಿದ. ಮೇಜಿನ ಮೇಲಿದ್ದ ಪುಸ್ತಕಗಳನ್ನು-ಚೆಲಾಪಿಲ್ಲಿಯಾಗಿಯೇ ಹರಡಿದ್ದ ಹಲವನ್ನು ಒಂದರ ಮೇಲೊಂದಾಗಿ ಓರಣವಾಗಿ ಇರಿಸಿದ. ಆ ಕಪಾಟದ ಕೆಳಭಾಗ ಶಾಲೆಯ ಪುಸ್ತಕಭಂಡಾರವೂ ಆಗಿತ್ತು, ಅಲ್ಲಿ ನೂರಿನ್ನೂರು ಕನ್ನಡ ಪುಸ್ತಕಗಳಿದ್ದವು. ಅವು ಕೂಡಾ ನೋಡಿಕೊಳ್ಳುವವರಿಲ್ಲದೆ ಅನಾಥವಾಗಿದ್ದವು. ಬೇರೊಂದು ಪುಸ್ತಕ ಭಂಡಾರ ಒಳಗಿದೆಯೇನೋ' ಎನ್ನಿಸಿತು. ಆದರೆ ಆ ಬಡ ಶಾಲೆ-ಆತನಿಗೆ ತಿಳಿಯದೆ? 'ಈ ಕೊಠಡಿಯೇ ಶಾಲೆಯ ಸಕಲ ಸಂಪತ್ತಾಗಿರಬೇಕು.” ಶಾಲೆಗೊಂದು ಒಳ್ಳೆಯ ಪುಸ್ತಕ ಭಂಡಾರವಿಲ್ಲವೆನ್ನುವುದು ಖೇದದ ವಿಷಯವೇ. ಆದಷ್ಟು ಬೇಗನೆ ಒಳ್ಳೆ ಪುಸ್ತಕಗಳ-ಹೊಸ ಪುಸ್ತಕಗಳ-ಸಂಖ್ಯೆ ಹೆಚ್ಚಿಸಬೇಕು. ಮುಖ್ಯೋಪಾಧ್ಯಾಯರಿಗೆ ಬಿಡುವಿಲ್ಲ