ಪುಟ:Duurada Nakshhatra.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

... ... ...

ಕೂಗಳತೆಯ ದೂರದಲ್ಲೆ ಇತ್ತು ಮುಖ್ಯೋಪಾಧ್ಯಾಯರ ಮನೆ. ಹೊರಗೆ ಹಿತ್ತಿಲು. ಗಾಳಿ ಬೆಳಕು ಓಡಾಡುವ ಕಿಟಕಿಗಳು. ಮೇಲೆ ಹೆಂಚು ಹೊದಿಸಿತ್ತು. ಮನೆಯ ಮುಂದೆ ರಂಗೋಲೆ ಬಿಡಿಸಿದ್ದರು. ನೀರವವಾಗಿ ಶಾಂತವಾಗಿ ಮನಸಿಗೆ ನೆಮ್ಮದಿಯನ್ನುಂಟುಮಾಡುವ ಹಾಗಿತ್ತು ವಾತಾವರಣ.

“ಸಾವಿತ್ರೀ!"

ರಂಗರಾಯರು ಕರೆದರು. ಬಂದು ಬಾಗಿಲು ತೆರೆದಾಕೆ ಮಧ್ಯಮ ವಯಸ್ಸಿನ ಸ್ತ್ರೀ. ತಲೆಗೂದಲು ಅರ್ಧಕ್ಕರ್ಧ ಬಿಳಿಯಾಗಿತ್ತು. ನೋಡಿದವರಿಂದೆಲ್ಲಾ ಗೌರವವನ್ನು ಅಪೇಕ್ಷಿಸುವ ಭಾವವಿತ್ತು. ವಯೋಭಾರದಿಂದ ತುಂಬಿಕೊಂಡಿದ್ದ ಆ ಮುಖದ ಮೇಲೆ.

“ನಮ್ಮ ಹೊಸ ಮೇಷ್ಟ್ರು ಬಂದಿದ್ದಾರೆ ಸಾವಿತ್ರಿ, ಕರಕೊಂಡ್ಬಂದಿದೇನೆ.”

ಆಕೆ ಮನೆಯ ಯಜಮಾನಿತಿ ಎನ್ನುವುದು ಜಯದೇವನಿಗೆ ಖಚಿತವಾಯಿತು. ಯಜಮಾನಿತಿ ಸ್ವಲ್ಪ ಸಂಕೋಚದ ದೃಷ್ಟಿಯಿಂದಲೇ ತಮ್ಮ ಗಂಡನ ಭುಜದ ಮೇಲಿಂದ ಇಣಿಕಿ ನೋಡಿದರು. ವಿದ್ಯಾರ್ಥಿಯ ಹಾಗೆಯೇ ಇದ್ದ ಆ ಯುವಕ... ಅವರ ಮೊದಲನೆಯ ಹುಡುಗ ಗೋಪಣ್ಣನಿಗಿಂತಲೂ ಚಿಕ್ಕವನು...ಆಕೆ ಮುಗುಳ್ನಕ್ಕಳು.

ಮನೆಯ ಒಳಗೂ ಅಷ್ಟೇ. ಗೋಡೆಗೆ ಸುಣ್ಣ ಬಳೆದಿತ್ತು. ಹಜಾರದಲ್ಲಿದ್ದುದೊಂದೇ ದೇವರ ಪಠ—ಸರಸ್ವತಿಯದು. ಆದರೆ ಸುತ್ತಲೂ ಕಟ್ಟುಹಾಕಿದ್ದ ಭಾವಚಿತ್ರಗಳಿದ್ದವು -ಕೆಲವು ಹೊಸತು, ಕೆಲವು ಮಾಸಿದುವು. ಗಾಂಧೀಜಿಯ ಬಣ್ಣದ ಚಿತ್ರವಿತ್ತು. ಕಾಳಿಂಗನನ್ನು ಮರ್ದಿಸುತ್ತಿದ್ದ ಕೃಷ್ಣನ ಚಿತ್ರ ಹೊತ್ತ ತಾರೀಖುಪಟ್ಟಿಯೊಂದಿತ್ತು.

ಹುಡುಗರು, ಜಯದೇವನ ಹಾಸಿಗೆಯನ್ನೂ ಚೀಲವನ್ನೂ ಕೆಳಕ್ಕಿರಿಸಿ ಶಾಲೆಗೆ ವಾಪಸು ಹೋದರು.

ಹಜಾರದಲ್ಲಿದ್ದ ಕುರ್ಚಿಯತ್ತ ಬೊಟ್ಟುಮಾಡಿ ರಂಗರಾಯರೆಂದರು:

“ಕೂತಿರಿ ಜಯದೇವ್, ಈಗ ಬಂದೆ.”

“ಆಗಲಿ ಸಾರ್, ಏನೂ ಪರವಾಗಿಲ್ಲ.”