ಪುಟ:Duurada Nakshhatra.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಸರಿಯೆ. ಆದರೆ ಎಲ್ಲರೂ ಬೇರೆ ಬೇರೆ ಲೈನೇ ಹಿಡಿದಿದ್ದಾರಲ್ಲಾ ? ಉಪಾಧ್ಯಾಯವೃತ್ತಿ ಯಾರಿಗೂ ಇಷ್ಟವಾಗ್ಲಿಲ್ವೇನೊ ?"

ರಂಗರಾಯರು ನಕ್ಕರು. ಸ್ವಲ್ಪ ಹೊತ್ತು ಉತ್ತರವನ್ನೇ ಕೊಡಲಿಲ್ಲ, ಆ ಮೇಲೆ ನಿಧಾನವಾಗಿ ಅಂದರು:

“ನಿಮ್ಮ ಹತ್ತಿರ ಆ ವಿಷಯ ಹೇಳದೆ ಇರೋದೇ ಮೇಲು ಅನ್ನಿಸುತ್ತೆ. ಆದರೆ ಹಾಗೆ ಮಾಡೋದೂ ತಪ್ಪಾಗುತ್ತೇನೋ! ಜಯದೇವ, ನನ್ನ ಮಕ್ಕಳು ಯಾರೂ ಉಪಾಧ್ಯಾಯರಾಗಿ ಸಂಕಟ ಅನುಭವಿಸ್ಬಾರ್ದು ಅನ್ನೋದು ನನ್ನ ಅಪೇಕ್ಷೆ.”

ಉಗುಳು ಗಂಟಲಲ್ಲಿ ತೊಡಕಾಗಿ ನಿಂತ ಜಯದೇವನ ಮುಖಬಾಡಿತು.

“ಯಾಕೆ ಹಾಗಂತೀರಾ?”

“ಇವತ್ತು ಬೇಡಿ ಆ ಮಾತು. ಮುಂದೆ ಯಾವತ್ತಾದರೂ ಹೇಳ್ತೀನಿ.”

ರಂಗರಾಯರ ನೋವನ್ನು ತನ್ನದಾಗಿಮಾಡಿ ಆ ಕಹಿ ಉಗುಳನ್ನು ಜಯದೇವ ನುಂಗಿದ.

ಎಲ್ಲ ಭಾವಚಿತ್ರಗಳಿಗಿಂತಲೂ ಎತ್ತದಲ್ಲಿದ್ದ ಮಸಕಾಗಿದ್ದ ಇನ್ನೊಂದು ಚಿತ್ರವನ್ನು ರಂಗರಾಯರು ತೋರಿಸಿದರು.

“ಅದನ್ನು ನೋಡಿದಿರಾ ?”

ಜಯದೇವನಿಗೆ ಸ್ಪಷ್ಟವಾಗಿ ಏನೂ ಕಾಣಿಸುತ್ತಿರಲಿಲ್ಲ.

ರಂಗರಾಯರು ಆ ಭಾವ ಚಿತ್ರವನ್ನು ಮೊಳೆಯಿಂದ ಕೆಳಕ್ಕೆ ತೆಗೆದರು.

"ಗಾಂಧೀಜಿ!"

“ಹೌದು, ಅವರು ನಂದಿಬೆಟ್ಟಕ್ಕೆ ಬಂದಿದ್ದಾಗ ತೆಗೆದದ್ದು... ಸರಿಯಾಗಿ ನೋಡಿ, ನಿಮ್ಮ ಗುರಿತಿನವರು ಯಾರಾದರೂ ಇದಾರೇನೋ?”

ಜಯದೇವ ಆ ಗುಂಪಿನಲ್ಲಿ ರಂಗರಾಯರನ್ನು ಹುಡುಕಿದ. ಎಲ್ಲೂ ಕಾಣಿಸಲಿಲ್ಲ.

ರಂಗರಾಯರು ಗುಂಪಿನಲ್ಲಿದ್ದ ಒಂದು ವ್ಯಕ್ತಿಯತ್ತ ಬೊಟ್ಟುಮಾಡಿದರು.

“ಇವರು ಯಾರಹಾಗಿದಾರೆ ಹೇಳಿ."

ಅಡ್ಡಪಂಚೆ, ಷರಟು, ತಲೆಯ ಮೇಲೆ ಗಾಂಧಿ ಟೋಪಿ. ಹುಡುಗನ