ಪುಟ:Duurada Nakshhatra.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಮಾತು ಕೇಳಿ ಸಾವಿತ್ರಮ್ಮನಿಗೆ ಬಲು ಸಂತೋಷವಾಯಿತು. ಅವರು ಮೈಮರೆತವರ ಹಾಗೆ ಹುಳಿಯನ್ನು ಎರಡು ಮೂರು ಸೌಟು ಹೆಚ್ಚಾಗಿಯೇ ಜಯದೇವನಿಗೆ ಬಡಿಸಿದರು.

“ಪಾಪ! ಬರೇ ಹುಳಿ ತಿನ್ನಿಸ್ತೀಯಲ್ಲೇ ಅವರಿಗೆ," ಎಂದು ನಗೆಯಾಡಿದರು ರಂಗರಾಯರು. ಜಯದೇವನನ್ನು ಮಾತ್ರ 'ನೀನು ತಿಳಿವಳಿಕೆಯುಳ್ಳವನು ಕಣಪ್ಪ'ಎಂದು ಮೆಚ್ಚುಗೆಯ ದೃಷ್ಟಿಯಿಂದ ನೋಡಿದರು.

ಊಟವಾದೊಡನೆಯೇ ಮತ್ತೆ ಶಾಲೆಗೆ ಹೊರಟರು ಮುಖ್ಯೋಪಾಧ್ಯಾಯರು, ಹೊರಡುತ್ತ ಅವರೆಂದರು:

"ನೀವು ಸ್ವಲ್ಪ ವಿಶ್ರಾಂತಿ ತಗೊಳ್ಳಿ ಜಯದೇವ. ಮಲಕ್ಕೊಂಡ್ಬಿಡಿ ಐದು ಘಂಟೆಗೆ ಸರಿಯಾಗಿ ಶಾಲೆಗ್ಬನ್ನಿ. ಒಳಗೆ ಹೇಳಿರ್ತೀನಿ. ಎಬ್ಬಿಸ್ತಾರೆ.ಚಾಪೆ ತಂದ್ಕೊಡ್ಲಾ ?"

ಶುಭ್ರವಾದ ಬಟ್ಟೆಬರೆಗಾಗಿ ಬಿಚ್ಚಿದ್ದ ಹಾಸಿಗೆ ಹಾಗೆಯೇ ಮುದುಡಿಕೊಂಡಿತ್ತು. ಅದನ್ನು ನೋಡುತ್ತ ಜಯದೇವನೆಂದ:

“ಬೇಡಿ. ಇದನ್ನೇ ಬಿಡಿಸ್ಕೊತೀನಿ.”

“ಸರಿ ಹಾಗಾದರೆ."

... ಸಾವಿತ್ರಮ್ಮ ಮನೆಗೆಲಸದಲ್ಲೇ ನಿರತರಾದರು. ಜಯದೇವ ಹೊರಗೆ ಹಜಾರದಲ್ಲಿ ಹಾಸಿಗೆಯ ಮೇಲೊರಗಿಕೊಂಡ. ಬಿಸಿಲಿನ ಕಬ್ಬಿಣದ ಕೋಟೆಯನ್ನೂ ಭೇದಿಸಿ ತಂಗಾಳಿ ನುಸುಳಿ ಬಂತು. ಯೌವ್ವನದ ಕೆಚ್ಚಿನಿಂದಯಾವ ಆಯಾಸಕ್ಕೂ ಮಣಿಯದೆ ಇದ್ದ ಮೈ, ಮಂಪರಿನ ಮಬ್ಬಿನಲ್ಲಿ ಸಡಿಲುಗೊಂಡೊಡನೆ ನಿದ್ದೆಗೆ ಶರಣು ಹೋಯಿತು.