ಪುಟ:Duurada Nakshhatra.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಅಯ್ಯೋ, ಆಗ್ಲೇ ಹಾಗಂದಿದ್ರೆ ರಾತ್ರಿಗೆ ಅಕ್ಕಿಹಾಕ್ಬೇಡಾಂತ ಮನೇಲಿ ಹೇಳ್ತಿದ್ನಲ್ಲಾ” ಎಂದು ರಂಗರಾಯರು ನಕ್ಕು, ಜಯದೇವನನ್ನು ಉದ್ದೇಶಿಸಿ ಅಂದರು:

"ನಮ್ಮ ನಂಜುಂಡಯ್ಯ ಕಾಫಿ ಕುಡಿಸೋ ದಿವಸ ಆನಂದವಿಲಾಸದ ಮಾಲಿಕನ ಭಾಗ್ಯ ಕಣ್ಣು ತೆರೆದ ಹಾಗೆ. ನಡೀರಿ ಹೋಗೋಣ...”

ಅವರು ಮೂವರೂ ಹಾದಿ ನಡೆಯುತ್ತಿದ್ದಂತೆ ಜಯದೇವನ ವಿಷಯವಾಗಿ ಮಾತು ಹೊರಟಿತು.

ನಂಜುಂಡಯ್ಯ ಕೇಳಿದರು:

“ಒಬ್ಬಂಟಿಗ ತಾನೆ?”

“ಹೌದು ಸಾರ್, ಒಬ್ಬಂಟಿಗ..”

“ಹಾಗಾದರೆ ಇಲ್ಲಿ ವಸತಿ ಏರ್ಪಾಟು ಹ್ಯಾಗ್ಮಾಡ್ತೀರ?”

ಜಯದೇವ ರಂಗರಾಯರ ಮುಖದತ್ತ ನೋಡಿದ. ಅವರೂ ಜಯದೇವನ ಉತ್ತರವನ್ನು ಕುತೂಹಲದಿಂದ ಇದಿರು ನೋಡುತ್ತಿದ್ದರು.

“ಇಲ್ಲಿ ಬಾಡಿಗೆಗೆ ರೂಮುಗಳು ಸಿಗೊಲ್ವೆ?"

“ಓಹೋ! ಅದಕ್ಕೇನು ? ಆದರೆ ಊಟ-”

"ಹ್ಯಾಗಾದರೂ ಆಗುತ್ತೆ. ಹೋಟೆಲಲ್ಲಿ ಮಾಡಿದರಾಯಿತು.”

ನಂಜುಂಡಯ್ಯ ಸೂಕ್ಷ್ಮವಾಗಿ ಜಯದೇವನನ್ನು ಪರೀಕ್ಷಿಸುತ್ತಲೇ ಇದ್ದರು. ಆ ಪರೀಕ್ಷೆಯ ಒಂದಂಶವಾಗಿಯೇ ಅವರ ಪ್ರಶ್ನೆ ಬಂತು:

“ನೀವು ಯಾವ ಜನ ಮಿಷ್ಟರ್ ಜಯದೇವ್ ? ಹೀಗೆ ಕೇಳಿದೆ ಅಂತ ತಪ್ಪು ತಿಳ್ಕೋಬೇಡಿ.”

ಆ ಬೆಳಗಿನಿಂದಲೇ ನಂಜುಂಡಯ್ಯನವರನ್ನು ಪೀಡಿಸುತ್ತಿದ್ದ ಪ್ರಶ್ನೆ ಅದು. ರಂಗರಾಯರೂ ಆ ವಿಚಾರವಾಗಿ ಯೋಚಿಸಿದ್ದರು. ಆ ಕಾರಣದಿಂದಲೇ ಅವರಿಬ್ಬರ ಊಟವೂ ಮನೆಯ ಒಳಕೊಠಡಿಯಲ್ಲಿ ಆಗಿರಲಿಲ್ಲ. ಆದರೆ ನೇರವಾಗಿ ಜಯದೇವನನ್ನು ಕೇಳುವುದು ತಪ್ಪೆಂದು, ರಂಗರಾಯರಿಗೆ ತೋರಿತ್ತು. ನಂಜುಂಡಯ್ಯ ಒಮ್ಮೆಲೆ ಕೇಳಿದ್ದನ್ನು ಕಂಡು ರಂಗರಾಯರಿಗೆ ಒಂದು ವಿಧವಾಯಿತು. ಆದರೆ ತಮ್ಮ ಮನಸ್ಸಿನಲ್ಲಿ ಮೂಡಿದ್ದ ಪ್ರಶ್ನೆಗೂ ಈಗ ಉತ್ತರ ದೊರೆಯುವುದೆಂಬ ಸಮಾಧಾನವೂ ಆಗದಿರಲಿಲ್ಲ.