ಪುಟ:Duurada Nakshhatra.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

6

ನೀವು ಯಾವ ಜನ?- ಜಯದೇವ ನಿರೀಕ್ಷಿಸಿದ್ದ ಪ್ರಶ್ನೆ ಬಂದಿತ್ತು. ಆದರೆ ಉತ್ತರ?

ಆತನ ಮೌನ ನಂಜುಂಡಯ್ಯ-ರಂಗರಾಯರಿಬ್ಬರ ಕೌತುಕವನ್ನೂ ಮತ್ತಷ್ಟು ಹೆಚ್ಚಿಸಿತು.

“ನಾನು ಆ ಪ್ರಶ್ನೆ ಕೇಳಬಾರದಾಗಿತ್ತೇನೊ? ತಪಾಗಿದ್ದರೆ ಕ್ಷಮಿಸಿ.”

“ಛೆ! ಛೆ! ಅದರಲ್ಲೇನು? ಆದರೆ ನನ್ನ ಉತ್ತರದಿಂದ ಪ್ರಶ್ನೆ ಕೇಳೋವರಿಗೆ ಯಾವಾಗ್ಲೂ ತೃಪ್ತಿಯಾಗೋದೇ ಇಲ್ಲ.”

“ಹಾಗಂದ್ರೆ ?"

“ನನಗೆ ಜಾತಿ-ಮತದಲ್ಲಿ ನಂಬಿಕೆ ಇಲ್ಲ.”

“ಓ!"

ಉದ್ಗರಿಸಿದರು ನಂಜುಂಡಯ್ಯ, ರಂಗರಾಯರಿಗೂ ಆಶ್ಚರ್ಯವೆನಿಸದಿರಲಿಲ್ಲ.

ಅನಂತರದ ಮೌನವನ್ನೂ ನಂಜುಂಡಯ್ಯನೇ ಭೇದಿಸಬೇಕಾಯಿತು.ತಮಗೇನೋ ಅವಮಾನವಾದವರಂತೆ ಅವರ ಮುಖ ಕೆಂಪಗಾಗಿತ್ತು.

“ಜಾತಿಗೀತೀಲಿ ಯಾರಿಗೆ ನಂಬಿಕೆ ಇದೆ? ನಮಗಿದ್ಯೇನು? ಸುಮ್ನೆ ಕೇಳಿದೆ, ಅಷ್ಟೆ, ಮನುಷ್ಯರಾಗಿ ಹುಟ್ಟಿದ್ಮೇಲೆ ಜಾತಿ ಅಂತ ಒಂದಿರುತ್ತೆ ಅಲ್ವೆ ?"

ರಂಗರಾಯರಿಗೇನೋ ಜಯದೇವನ ಉತ್ತರ ಅಪ್ರಿಯವಾಗಿ ತೋರಲಿಲ್ಲ. ಆದರೆ, ಹೊಸದಾಗಿ ಅಧ್ಯಾಪಕ ವೃತ್ತಿಗಿಳಿದಿದ್ದ ಆತನ ವ್ಯಕ್ತಿತ್ವ ಸ್ವಲ್ಪ ವಿಚಿತ್ರವಾಗಿಯೇ ಕಂಡಿತು.

ತನ್ನ ಉತ್ತರವನ್ನು ವಿವರಿಸುವ ತವಕವನ್ನೇನೂ ಜಯದೇವ ತೋರಿಸಲಿಲ್ಲ. ಮನಸ್ಸಿನೊಳಗಿನ ವಿವಿಧ ಭಾವನೆಗಳಿಗೆಲ್ಲ ನಗೆಯನ್ನು ಮುಖವಾಡವಾಗಿ ಮಾಡಿ ಆತ ಮೌನವಾಗಿಯೆ ನಿಂತ.

ಆದರೆ ಉಗುಳು ನುಂಗಿ ಸುಮ್ಮನಾಗುವ ವ್ಯಕ್ತಿಯಾಗಿರಲಿಲ್ಲ ನಂಜುಂಡಯ್ಯ.

“ಹೆಸರು ಜಯದೇವ ಅಂತಿದೆಯಲ್ಲ-ಅದಕ್ಕೆ ಕೇಳಿದೆ.”

ಹೆಸರಿನಿಂದಲೆ ಜಾತಿಯನ್ನು ನಿರ್ಧರಿಸುವ ಜಾಣ್ಮೆ-!