ಪುಟ:Duurada Nakshhatra.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಹೆಸರಿನ ವಿಷಯ ಕೇಳಿದಿರಾ? ಅದೇನೋ ಸಾರಸ್ಯವಾಗಿಯೇ ಇದೆ” ಎಂದು ನುಡಿದು ಜಯದೇವ ವಿವರಣೆಯನ್ನಿತ್ತ:

“ಮೂಲ ನಾಮಕರಣ ಜಯ ಅಂತ. ತಂದೆಯ ದಾಖಲೆಯಲ್ಲಿ ಜಯರಾವ್ ಅಂತಾಯ್ತು. ಮನೆಯಲ್ಲಿ ಜಯಣ್ಣನಾದೆ. ಆದರೆ ತಬ್ಬಲಿಯಾದ ನನ್ನನ್ನ ಕೆಲವು ವರ್ಷ ನಿಜವಾಗಿ ಪಾಲಿಸಿ ಪೋಷಿಸಿದವರು ನಮ್ಮ ಪಕ್ಕದ್ಮನೆಯವರು-ಲಿಂಗಾಯತ ದಂಪತಿಗಳು. ಅವರಿಗೆ ಮಕ್ಕಳಿರ್ಲಿಲ್ಲ. ನಾನು ಅವರಿಗೆ ಪ್ರೀತಿಯ ಜಯದೇವನಾದೆ. ಕೊನೆಗೆ ಅದೇ ಖಾಯಂ ಆಗ್ಹೋಯ್ತು!... ಯಾಕೆ-ಜಯದೇವ ಅಂತ ಹೆಸರು ಇರ್ಕೂಡ್ದೆ ?”

ನಂಜುಂಡಯ್ಯ ಆ ಮಾತಿನಲ್ಲಿ ಪುರಸ್ಕಾರವೀಯಲು ನಿರಾಕರಿಸುವ ಧ್ವನಿಯಲ್ಲಿ ಅಂದರು:

“ಇಡದೇ ಏನು ? ಅಂತೂ ನೀವು ಹೇಳಿದ್ದು ಸ್ವಾರಸ್ಯವಾಗಿಯೇ ಇದೆ !"

ರಂಗರಾಯರಿಗೇನೋ ಈ ಮನೋವೃತ್ತಿ ಹೊಸದಾಗಿರಲಿಲ್ಲ. ಒಂದು ಕಾಲದಲ್ಲಿ ಅವರಿಗೂ ಅಂತಹ ಭಾವನೆಗಳು ಬಂದಿದ್ದವು. ಯೌವನದ ಆ ಆದರ್ಶಗಳನ್ನು ಬೇರೆ ಕೆಲವರಲ್ಲೂ ಅವರು ಕಂಡಿದ್ದರು. ಆ ಆದರ್ಶಗಳ ಬಗೆಗೆ ಅವರಿಗೆ ಉಪೇಕ್ಷೆ ಇರಲಿಲ್ಲ.

ಆದರೆ ಜಯದೇವನ ಉತ್ತರದಿಂದ ನಂಜುಂಡಯ್ಯನ ಮೇಲಾದ ಪ್ರತಿಕ್ರಿಯೆಗಳೇ ಬೇರೆ. ಹೊಸನೇಮಕದ ಅನುಜ್ಞೆ ಪತ್ರ ನೋಡಿದಂದಿನಿಂದ ಜಯದೇವ ಎಂಬ ವ್ಯಕ್ತಿ ತಮ್ಮ ಜನವೇ ಎಂದು ಅವರು ಭಾವಿಸಿದ್ದರು.ವಿದ್ಯಾರ್ಥಿಯಾಗಿದ್ದಾಗಲೆ ಅವರಲ್ಲಿ ಮೈಗೂಡಿ ಬಂದಿದ್ದ ಸ್ವಜಾತಿ ಅಭಿಮಾನ ಜಯದೇವನ ಆಗಮನದಲ್ಲಿ ವಿಶೇಷ ಆಸಕ್ತಿಯನ್ನು ಅವರು ವಹಿಸುವಂತೆ

ಮಾಡಿತ್ತು. ಆ ಕಾರಣದಿಂದ ಸಂಜೆ ನಡೆದ ಮಾತುಕತೆಯಿಂದ ಅವರಿಗೆ ಅಸಮಾಧಾನವಾಗದೆ ಇರಲಿಲ್ಲ.

ಆದರೂ ಆದಷ್ಟು ಮಟ್ಟಿಗೆ ಸುಪ್ರಸನ್ನರಾಗಿಯೇ ಅವರು ಆನಂದ ವಿಲಾಸದಲ್ಲಿ ಬೂಂದಿಲಾಡಿಗೂ ತುಪ್ಪದೋಸೆಗೂ 'ಆರ್ಡರು' ಕೊಟ್ಟರು.'ಸ್ಪೆಷಲ್' ಕಾಫಿ ಬಂತು. ಬೆಂಗಳೂರು ಮತ್ತು ಆ ಊರುಗಳ ಕಾಫಿ ತಿಂಡಿಗಳ ನಡುವಿನ ತಾರತಮ್ಮವೇ ಮಾತುಕತೆಯ ಮುಖ್ಯ ವಿಷಯವಾಯಿತು.