ಪುಟ:Duurada Nakshhatra.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಯದೇವ ಪ್ರತುತ್ತರ ಹೇಳುವುದನ್ನು ತಡೆಯಬೇಕೆಂದೊ ಏನೋ ನಂಜುಂಡಯ್ಯ ತಮ್ಮ ಮನೆಯ ವೃತ್ತಾಂತ ಹೇಳತೊಡಗಿದರು:

“ನಾವು ನಾಲ್ಕುಜನ ಅಣ್ಣ ತಮ್ಮಂದಿರು. ಮೂವರು ತಂಗಿಯರು. ನಿಮ್ಮನ್ನು ಕರಕೊಂಡು ಬಂದ್ನಲ್ಲ ವಿರೂಪಾಕ್ಷ, ಅವನೇ ಕೊನೆಯವನು. ಹೆಣ್ಣುಮಕ್ಕಳಿಗೆಲ್ಲಾ ಮದುವೆಯಾಗಿದೆ. ತಂದೆಯವರು ತೀರಿಕೊಂಡ್ಮೇಲೆ ಪಾಲಾಯ್ತು, ದೊಡ್ಕಣ್ಣ ಇದೇ ಮನೆಯ ಇನ್ನೊಂದು ಭಾಗದಲ್ಲಿದಾನೆ. ಪೇಟೇಲಿ ಅವನ ರಖಂ ವ್ಯಾಪಾರದ ಅಂಗಡಿ ಇದೆ. ಅವನಿಗಿಂತ ಚಿಕ್ಕೋನು ರೆವಿನ್ಯೂ ಖಾತೇಲಿದಾನೆ-ಲಿಂಗಣ್ಣಯ್ಯ ಅಂತ.. ನೀವು ಹೆಸರು ಕೇಳಿದೀರೋ ಏನೋ... ಆತನೂ ಗ್ರ್ಯಾಜುಯೇಟ್...”

ಕೊನೆಯ ಪದಗಳೆರಡು-'ಆತನೂ ಗಾಜುಯೇಟ್' ನಂಜುಂಡಯ್ಯನಿಗೆ ಪದವೀಧರರನ್ನು ಕುರಿತು ಹೆಚ್ಚು ವಿಶ್ವಾಸವಿತ್ತೆಂಬುದರಲ್ಲಿ ಸಂದೇಹವಿರಲಿಲ್ಲ.ತಾನು? ತಾನು ಪದವೀಧರನಲ್ಲ, ಇನ್ನೂ ಎರಡು ವರ್ಷ ಕಲಿಯುವುದು ಸಾಧ್ಯವಾಗಲಿಲ್ಲ ತನ್ನಿಂದ.

ಪುಟ್ಟ ಹೆಣ್ಣು ಮಗುವೊಂದು ತಪ್ಪು ಹೆಜ್ಜೆಗಳನ್ನಿಡುತ್ತಾ “ಅಪ್ಪಾ ಅಪ್ಪಾ,” ಎನ್ನುತ್ತಾ ಒಳಕ್ಕೆ ಬಂತು. ಅಪರಿಚಿತನನ್ನು ನೋಡಿ ಅಪ್ಪನೆಡೆಗೆ ಬೇಗ ಬೇಗನೆ ಧಾವಿಸಿತು.

“ನೋಡು, ಯಾರು ನೋಡು.. ಮಾವ ಬಂದವ್ರೆ, ಮಾವ...!”

ಹಾಗೆನ್ನುತ್ತ ನಂಜುಂಡಯ್ಯ, ಜಯದೇವನನ್ನ ಮಗುವಿಗೆ ತೋರಿಸಲೆತ್ನಿಸಿದರು. ಆದರೆ ಆ ಮಗು, ನೋಡಲು ನಿರಾಕರಿಸಿ ತಂದೆಯ ಎದೆಯೊಳಗೆ ಮುಖವನ್ನು ಬಚ್ಚಿಟ್ಟಿತು.

“ಮಗಳು ಅಲ್ವೆ?”

ಅಪರಿಚಿತನ ಸ್ವರ ಕೇಳಿ ತನ್ನ ಮುದ್ದು ಮುಖವನ್ನೆತ್ತಿ ಒಂದು ಆರೆಕ್ಷಣ ಬೆರಗು ನೋಟದಿಂದ ಜಯದೇವನನ್ನು ನೋಡಿತು. ಜಯದೇವ ಮುಗುಳ್ನಕ್ಕ, ಆದರೆ ಆತನ ದೃಷ್ಟಿಯನ್ನು ಸಂಧಿಸಿದೊಡನೆಯೇ ಮಗು ಮತ್ತೆ ತಂದೆಯ ಎದೆಯ ಮರೆಯಲ್ಲಿ ಆಶ್ರಯ ಪಡೆಯಿತು.

“ಹೌದು; ಇನ್ನೊಬ್ಬಳಿದಾಳೆ ದೊಡ್ಡವಳು.”

“ಇಬ್ಬರೇನಾ?”

"ಹೂಂ"