ಪುಟ:Duurada Nakshhatra.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಯಾಕೆ?"

“ನಿಮ್ಮ ಜನ ಸಾಮಾನ್ಯವಾಗಿ ನಮ್ಮವರಲ್ಲಿ ಊಟ ಮಾಡೋದಿಲ್ಲ.”

ಜಯದೇವನಿಗೆ ನೋವಾಯಿತು.

“ನಮ್ಮ ಜನ ಅಂದರೆ? ದಯವಿಟ್ಟ ಹಾಗೆ ಮಾತಾಡ್ಬೇಡಿ ಸಾರ್. ಜಾತಿ ವಿಷಯದಲ್ಲಿ ನನ್ನ ಅಭಿಪ್ರಾಯ ಏನೂ೦ತ ನಿನ್ನೆಯೇ ಹೇಳಿಲ್ವೇ?"

"ಸಾರಿ, ಕ್ಷಮಿಸಿ"

ಆದರೆ ಮತ್ತೊಮ್ಮೆ ಜಯದೇವನ ಬಾಯಿಂದ ಆ ಮಾತು ಕೇಳಬೇಕೆಂದೇ ನಂಜುಂಡಯ್ಯ ಹಾಗೆ ಅಂದಿದ್ದರು. ಮುಂದಿನ ಅವರ ಬೇರೆ ಮಾತುಗಳಿಗೆ ಆ ನೆಲೆಗಟ್ಟು ಅವಶ್ಯವಾಗಿತ್ತು,

ಅದನ್ನು ತಿಳಿಯಲಾರದೆ ಜಯದೇವ, 'ಈ ಜಾತಿ ಮತಗಳ ಗೀಳಿನಿಂದ ನಮ್ಮ ದೇಶಕ್ಕೆ ಯಾವತ್ತು ಮುಕ್ತಿಯೋ? ಎಂದು ಚಿಂತಿಸುತ್ತ ಕೊನೆಯ ತುತ್ತನ್ನೆತ್ತಿ ಬಾಯಿಗಿಟ್ಟ.

ಕೈತೊಳೆದು ಬಂದು ಮತ್ತೆ ಕುರ್ಚಿಯ ಮೇಲೆ ವಿರಮಿಸಲೆಂದು ಕುಳಿತಾಗಲೂ ಜಯದೇವನ ಮೆದುಳು ಕೆಲಸ ಮಾಡುತ್ತಲೇ ಇತ್ತು.

—ನಂಜುಂಡಯ್ಯ ಸುಸಂಸ್ಕೃತ ನಾಗರಿಕರು, ಪದವೀಧರರು. ಮನೆಯಲ್ಲಿ ಒಳ್ಳೆಯ ಯಜಮಾನ.. ಊರಲ್ಲೂ ಅವರಿಗೆ ಗೌರವವಿದ್ದೇ ಇರಬೇಕು. ಇಂಥವರ ದೃಷ್ಟಿ ವಿಶಾಲವಾಗುವುದು ಸಾಧ್ಯವಿಲ್ಲವೆ?

“ಸಿಗರೇಟಂತೂ ನೀವು ಸೇದೊಲ್ಲ, ಎಲೆ ಹಾಕಿಕೊಳ್ತಿರೇನು?

ಜಯದೇವನನ್ನು ಉದ್ದೇಶಿಸಿ ಪ್ರಶ್ನೆ ಬಂತು.

“ಇಲ್ಲ ಸಾರ್... ಅದನ್ನೂ ಅಭ್ಯಾಸ ಮಾಡಿಲ್ಲ. . . . . ."

ನಂಜುಂಡಯ್ಯ ನಕ್ಕರು.

“ನೀವು ಯಾವುದಾದರೂ ಒಂದು ಅಭ್ಯಾಸ ಮಾಡ್ಬೇಕು ಜಯದೇವ್. ಕಡೆಪಕ್ಷ ನಶ್ಯನಾದರೂ ಹಾಕಿ!! ಹುಡುಗರು ಗುರುದಕ್ಷಿಣೆ ಏನಪ್ಪಾ ಕೊಡೋದೂಂತ ತಬ್ಬಿಬ್ಬಾಗ್ಬಾರ್ದು."

ತಾನು ಮತ್ತು ನಶ್ಯ! ತಲೆಗೆ ರುಮಾಲು, ಮೂಗಿನ ಮೇಲೆ ಕನ್ನಡಕ, ನುಚ್ಚುಕಾಲರಿನ ಕೋಟು, ಕೈಯಲ್ಲಿ ಬೆತ್ತ.. ಡಬ್ಬ ಹೊರತೆಗೆದು ತೋರು