ಪುಟ:Duurada Nakshhatra.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೊದಲ ಮೂರು ತರಗತಿಗಳಿಗೆ ಕನ್ನಡ-ಇತಿಹಾಸ-ಭೂಗೋಳಗಳ ಉಪಾಧ್ಯಾಯನಾದ ಜಯದೇವ.

ರಂಗರಾಯರು ಪ್ರತಿಯೊಂದು ತರಗತಿಗೂ ಆತನನ್ನೊಯ್ದು ಪರಿಚಯ ಮಾಡಿಕೊಟ್ಟರು. ಪ್ರತಿಯೊಂದು ತರಗತಿಯಲ್ಲೂ ಹುಡುಗರು, ಮುಖ್ಯೋಪಾಧ್ಯಾಯರ ಸೂಚನೆಯಂತೆ, ಗಂಟಲು ಬಿರಿದು ಹೋಗುವ ಹಾಗೆ ಜಯ ದೇವನನ್ನು ಕುರಿತು ನಮಸ್ಕಾರ ಎಂದರು.

ನಾಲ್ಕನೇ ತರಗತಿಯವರೋ ಎಲ್.ಎಸ್. ಪರೀಕ್ಷೆ ಕಟ್ಟುವ ಹುಡುಗರು. ಕೆಲವರಂತೂ ದೊಡ್ಡ ಹುಡುಗರಾಗಿದ್ದರು. ಆರೇಳು ಜನ ಹುಡುಗಿಯರೂ ಇದ್ದರು. ಲಂಗ ಸೀರೆಗಳು. ಹಿಂದಿನ ದಿನ ಆಫೀಸು ಕೊಠಡಿಯಲ್ಲಿ ತಾನು ಕುಳಿತಿದ್ದಾಗ ಆ ಹುಡುಗಿಯರೇ ಅತ್ತಿತ್ತ ಹಾದು ಹೋಗಿರಬೇಕು.. ಅದು ಶಾಲೆಯ ಹಿರಿಯ ಹುಡುಗರ ಬಳಗ, ಅವರೆದುರು ತಾನೂ ಒಬ್ಬ ಹುಡುಗನೇ ಎನಿಸಿತು ಜಯದೇವನಿಗೆ.. ಅವರೆಲ್ಲರನ್ನೂ ಅಂಕೆಯೊಳಗಿಡುವುದು ತನ್ನಿಂದ ಆಗದ ಮಾತು–ಎಂಬ ಅಳುಕು ಹುಟ್ಟಿತು. ಈ ಉಪಾಧ್ಯಾಯ ವೃತ್ತಿ ತನಗೆ ಸರಿಹೋಗುವುದೋ ಇಲ್ಲವೋ ಎಂಬ ಶಂಕೆ ಮೂಡಿತು... ... .....

ಆದರೆ ಬೇಗನೆ ಆತ ಮೊದಲ ತರಗತಿಗೆ ಹಿ೦ತಿರುಗಿ ಬಂದು ಬಡಕಲಾದ ಮೇಜಿನ ಹಿಂದಿದ್ದ ಹಳೆಯ ಕುರ್ಚಿಯ ಮೇಲೆ ಹಸನಮ್ಮಖಿಯಾಗಿ ಕುಳಿತ.

ಒಂದು ಕ್ಷಣ ಆತನ ದೃಷ್ಟಿಗೆ ಆ ಕೊಠಡಿ ತೇಲುತ್ತಿದ್ದ ತಲೆಗಳ ಸಾಗರವಾಯಿತು. ಮೆದುಳು ಯೋಚಿಸುವುದನ್ನೆ ನಿಲ್ಲಿಸಿತು. ಮಾತನಾಡುವ ಶಕ್ತಿಯನ್ನೆ ಕಳೆಧುಕೊಂಡ ಹಾಗಾಯಿತು ನಾಲಿಗೆ.

ಆದರೆ ತುಟಿಗಳ ಮೇಲಿನ ನಗು ಅಳಿಸಿಹೋಗಲಿಲ್ಲ, ಮೊಗ್ಗು, ಬಿರಿಯುವಂತೆ ಅದು ಅರಳಿತು. ತಮ್ಮದಲ್ಲದ ಗಾಂಭೀರ್ಯವನ್ನು ನಟಿಸುತ್ತ ಕುಳಿತಿದ್ದ ವಿದ್ಯಾರ್ಥಿಗಳು ಮುಖ ಸಡಿಲಿಸಿ ತಾವೂ ನಕ್ಕರು.

ಎಳೆಯರ ಆ ನಗು ಜಯದೇವನಿಗೆ ನವಚೇತನವನ್ನು ನೀಡಿತು. ಆತ, ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರು ಕೇಳಬೇಕೆಂದುಕೊಂಡ. ಆದರೆ ಮರು