ಪುಟ:Duurada Nakshhatra.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಂಜುಂಡಯ್ಯನ ತಮ್ಮ ವಿರೂಪಾಕ್ಷನೂ ಅವನ ಜೊತೆಯಲ್ಲಿ ಇನ್ನೊಬ್ಬ ಹುಡುಗನೂ ಆನಂದವಿಲಾಸಕ್ಕೆ ಹೋಗಿ ತಿಂಡಿ-ಕಾಫಿ ತಂದರು.

ತೊಂಡಿ ತಿನ್ನುತ್ತ ನಂಜುಂಡಯ್ಯ ಹೇಳಿದರು :

“ಆಗ ನಾನು ನಿಮ್ಮನ್ನ ಜಯದೇವರಾವ್ ಅಂತ ಕೂಗ್ದೆ.

” ಒಂದು ಗುಟುಕು ಕಾಫಿ ಕುಡಿದು ತಿಂಡಿಯನ್ನು ಗಂಟಲಿನೊಳಗಿಂದ ಕೆಳಕ್ಕೆ ತಳ್ಳುತ್ತಾ ಜಯದೇವನೆಂದ:

“ಹೌದು. ಆಗ್ಲೇ ಹೇಳೋಣಾಂತಿದ್ದೆ. ಮರ್ತೊಯ್ತು.”

“ಏನು, ಹಾಗೆ ಕೂಗ್ಬಾರ್ದೂಂತ್ಲೆ ?”

“ಯಾಕೋ ಆ ಸಂಬೋಧನೆ ನನಗೆ ಇಷ್ಟವಿಲ್ಲ.”

“ಹೋಗಲಿ ಬಿಡಿ, ತಮಾಷೆಗಂದೆ.. ಮನಸ್ಸಿಗೆ ಹಚ್ಕೊಬೇಡಿ.”

ಅಂತೂ ಜಯದೇವ ಸ್ವಲ್ಪ ವಿಚಿತ್ರವಾಗಿಯೆ ನಂಜುಂಡಯ್ಯನಿಗೆ ತೋರಿದ.

ಉಪಾಹಾರ ಮುಗಿದು ನಂಜುಂಡಯ್ಯ ಸಿಗರೇಟು ಹಚ್ಚಿದರು. ಸಿಗರೇಟಿನ ಹೊಗೆಯೊಡನೆ ಅವರ ಯೋಚನೆಗಳೂ ಸುರುಳಿ ಬಿಚ್ಚಿದುವು.

“ಈ ಶಾಲೇನ ನಾವು ತುಂಬಾ ಸುಧಾರಿಸ್ಬೇಕು ಜಯದೇವ್.”

“ಹೌದು, ಹಾಗ್ಮಾಡ್ಬೇಕು.”

“ನಿಮ್ಮಂಥವರ ಸಹಾಯ ಇದ್ರೆ ಈ ಸುಧಾರಣೆಯೆಲ್ಲ ದೊಡ್ಡ ಕೆಲಸವಲ್ಲ.”

-ಅದು, 'ನೀವು ಮತಕೊಟ್ಟರೆ ನಾನು ಚುನಾಯಿಸಿ ಬರುತ್ತೇನೆ' ಎನ್ನುವ ಧ್ವನಿಯಾಗಿತ್ತು ಜಯದೇವನಿಗೆ ಎನೊಂದು ಸ್ಪಷ್ಟವಾಗಲಿಲ್ಲ.

“ನಾನು ಇರೋದೇ ದುಡಿಯೋದಕ್ಕೋಸ್ಕರ ಅಲ್ವೆ?”

“ದುಡಿಯೋದಕ್ಕೇನ್ರಿ—ಎಲ್ರೂ, ದುಡೀತಾರೆ. ಆದರೆ, ಸುಧಾರಣೆ ಏನೂಂತ ತಿಳ್ಕೊಂಡು ಮಾಡೋರು ಬೇಡ್ವೆ?”

-ಹಾಗಾದರೆ ಈ ವರೆಗೂ ಸುಧಾರಣೆ ಎಂದರೇನೆಂಬುದು ರಂಗರಾಯರಿಗೆ ತಿಳಿದೇ ಇರಲಿಲ್ಲವೆಂದು ಅರ್ಥವೆ? ಪರೋಕ್ಷವಾಗಿ ಬಲು ಸೂಕ್ಷ್ಮವಾಗಿ ರಂಗರಾಯರನ್ನು ನಂಜುಂಡಯ್ಯ ಅವಹೇಳನ ಮಾಡಿದಂತಾಯಿತಲ್ಲವೆ?

ಯೋಚನೆಗಳನ್ನೆಲ್ಲ ಮರೆಮಾಡಿ ಜಯದೇವ ಹೇಳಿದ: “

ಅದಕ್ಕೇನು? ನಾವು ಮೂವರೂ ಕೂತು ಚರ್ಚಿಸಿದರಾಯಿತು.”