ಪುಟ:Duurada Nakshhatra.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಬನ್ನಿ!! ಬನ್ನಿ!! ದಯಮಾಡ್ಸಿ!”

ಧೋತರದ ಮೇಲೆ ತೆಳುವಾದ ಬನೀನು.. ಬಿಳಿಯು ಕೂದಲು ಸೇರಿಕೊಂಡಿದ್ದ ನುಣುಪಾದ ಕ್ರಾಪು, ಗಾತ್ರದ ಮೈ, ನಂಜುಂಡಯ್ಯನವರಷ್ಟೇ ವಯಸ್ಸು ಮುಖದ ಮೇಲಿನ ನಗೆ ಸಹಜವಾಗಿರಲಿಲ್ಲ.

ರಂಗರಾಯರತ್ತ ನೋಡಿ ಅವರೆಂದರು :

“ಏನು ಇಷ್ಟು ದೂರ ದಯಮಾಡಿಸಿದ್ರಿ ಹೆಡ್ಮೇಷ್ಟ್ರೇ?"

ಜಯದೇವನನ್ನು ನೋಡುತ್ತ ನಂಜುಂಡಯ್ಯನೊಡನೆ ಕೇಳಿದರು:

"ಇವರೇ ನಿಮ್ಮ ಹೊಸ್ಮೇಷ್ಟ್ರೋ?"

"ಹೌದು, ಹೌದು"

“ಸಂತೋಷ... ಸಂತೋಷ... ಯಾವಾಗ ಬರೋಣ್ವಾಯ್ತು?"

“ನಿನ್ನೇನೇ”

–ಎಂದ ಜಯದೇವ, ವಂದನೆ-ಪ್ರತಿವಂದನೆಯ ಉಪಚಾರವನ್ನು ಮುಗಿಸುತ್ತ. *

“ಸ್ಕೂಲು ಚೆನ್ನಾಗಿ ನಡೀತಾ ಇದೆಯೊ ರಂಗರಾಯರೇ? "

'ತಕ್ಕಮಟ್ಟಿಗಿದೆ ಶಂಕರಪ್ಪನವರೇ, ಇನ್ನೇನು, ಹೆಚ್ಚಿಗೆ ಒಬ್ಬರು ಉಪಾಧ್ಯಾಯರು ಬ೦ದ ಹಾಗಾಯ್ತಲ್ಲ, ನೀವು ಶಿಫಾರಸು ಮಾಡಿ ಒಬ್ಬ ಜವಾನನ್ನೂ ಕೊಡಿಸಿದರೆ--"

“ಆ ಮೇಲೆ ಇನ್ನೂ ಒಬ್ಬ ಉಪಾಧ್ಯಾಯರು ಬೇಕು ಅಂತೀರೇನೊ?”

“ಮಿಡ್ಲ್ ಸ್ಕೂಲು ಅಂದ್ಮೇಲೆ ನಾಲ್ಕು ಜನ ಇರ್ಬೇಡ್ವೆ?"

“ಸರಿ, ಸರಿ... ಈ ಖರ್ಚುಗಳೆಲ್ಲಾ ಹ್ಯಾಗಪ್ಪಾ ಸರ್ಕಾರ ನೋಡ್ಕೊಳ್ಳೋದು?”

ತಾವೇ ಸರ್ಕಾರ ಎನ್ನುವಂತೆ ಶಂಕರಪ್ಪ ಮಾತನಾಡುತಿದ್ದರು. ಜಯದೇವ ಅವರ ಬಟ್ಟೆಬರೆಯತ್ತ ದೃಷ್ಟಿ ಹಾಯಿಸಿದ. ಅದು ಖಾದಿಯಾಗಿರಲಿಲ್ಲ.. ಸರ್ಕಾರ-ಪಂಚಾಯತ ಬೋರ್ಡು ಎಂದೆಲ್ಲ ಕೇಳುತ್ತಲೇ ರಾಜಕಾರಣದ ವಿಚಾರಗಳು ಜಯದೇವನ ಬಳಿ ನುಸುಳಿದುವು. ನುಸುಳಿ ಹಾಗೆಯೇ ಮರೆಯಾದುವು. ಆ ವಿಷಯದಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ.

ಆದರೆ ಶಂಕರಪ್ಪ ಆ ಮಾತನ್ನೆ ಪ್ರಸ್ತಾಪಿಸಿದರು.

“ನೀವು ಯಾವ ಪಕ್ಷ ಇವರೆ?”