ಪುಟ:Duurada Nakshhatra.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಯದೇವನನ್ನು ಉದ್ದೇಶಿಸಿ ಆ ಪ್ರಶ್ನೆ ಬಂತು. ಯಾವ ಪಕ್ಷ, ಆತ? ಅದೇನೂ ಅವನಿಗೆ ತಿಳಿದಿರಲಿಲ್ಲ, ಆದರೆ ಸದ್ಯ ನೀವು ಯಾವ ಜಾತಿ? ಎಂದು ಅವರು ಕೇಳಲಿಲ್ಲವಲ್ಲ! ಅದು ಸಮಾಧಾನದ ವಿಷಯವಾಗಿತ್ತು.

“ನಾನು ಈವರೆಗೆ ಯಾವ ಪಕ್ಷಕ್ಕೂ ಸೇರಿಲ್ಲ.”

“ಹೂಂ.. ಉಪಾಧ್ಯಾಯರು ಅಂದ್ಮೇಲೆ ನೀವು ಹಾಗೆಲ್ಲ ಸೇರೋ ಹಾಗೂ ಇಲ್ಲಾಂತನ್ನಿ.”

ಆ ವಿಷಯ ಜಯದೇವನಿಗೆ ಆವರೆಗೆ ತಿಳಿದಿರಲಿಲ್ಲ. 'ಹಾಗೇನು?' ಎಂದು ಕೇಳಿ ಅಜ್ನ್ಯಾನ ಪ್ರದರ್ಶಿಸಬಾರದೆಂದು ಆತ ಸುಮ್ಮನಾದ.

ಆದರೆ ಶಂಕರಪ್ಪ ಸುಮ್ಮನಿರಲಿಲ್ಲ.

ಪ್ರತ್ಯಕ್ಷವಾಗಿ ಯಾವುದೇ ಪಕ್ಷ ಸೇರದೆ ಇದ್ರೂ ಮನಸ್ಸಲ್ಲಿ ಒಂದು ಪಕ್ಷ ಅಂತ ಇರೋದಿಲ್ವೆ? ಉದಾಹರಣೆಗೆ ರಂಗರಾಯರೆ ತಗೊಳ್ಳಿ—”

ರಂಗರಾಯರು ನಡುವೆ ಬಾಯಿ ಹಾಕಿದರು;

“ಏನಾದರೂ ಅನ್ಬಾರದು ಶಂಕರಪ್ಪನವರೇ.”

“ಏನಾದರೂ ಯಾಕನ್ಲಿ? ಹೋದ ಸಾರೆ ಸಾರ್ವತ್ರಿಕ ಚುನಾವಣೇಲಿ ನಮ್ಮ, ಕ್ಷೇತ್ರದಿಂದ ನೀವು ಯಾರ ಪರವಾಗಿ ಕೆಲಸ ಮಾಡಿದ್ರಿ ಅನ್ನೋದು ನಮಗೆ ಗೊತ್ತಿಲ್ವೆ? ಜನಕ್ಕೆ ಗೊತ್ತಿಲ್ವೆ?

ಆ ಸ್ವರ ಗಡುಸಾಗಿತು, ರಂಗರಾಯರು ಉಗುಳು ನುಂಗಿ ಸುಮ್ಮನಾದರು ತಮ್ಮ ಮಾತಿನಿಂದಾದ ಪರಿಣಾಮವನ್ನು ಗಮನಿಸಿ ಸಂತುಷ್ಟರಾಗಿ ಶಂಕರಪ್ಪ ಜಯದೇವನತ್ತ ತಿರುಗಿದರು:

“ಬೆಂಗಳೂರಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಇದಾವೆ. ನಿಮಗೆ ಯಾರಾದರೂ ಮುಖಂಡರ ಪರಿಚಯ ಉಂಟೇನೋಂತ ಕೇಳ್ದೆ.”

“ಇಲ್ಲ, ಇಲ್ಲ, ನನಗೆ ರಾಜಕೀಯದವರ ಪರಿಚಯ ಇಲ್ಲ.”

ಶಂಕರಪ್ಪನಿಗೆ ಅತೃಪ್ತಿಯಾಯಿತು. “ನೀವು ಒಳ್ಳೆ ಅವಕಾಶ ಕಳಕೊಂಡ್ರಿ, ಬೆಂಗಳೂರಲ್ಲೇ ಇದ್ಕೊಂಡು ಹೀಗಾದ್ರೆ–... ನನ್ನ ಸಲಹೆ ತಗೊಳ್ಳಿ.. ಬಹಿರಂಗವಾಗಿ ನೀವು ಯಾವುದೇ ಪಕ್ಷ ಸೇರದೇ ಇದ್ರೂವೆ, ನಿಮ್ಮಷ್ಟಕ್ಕೆ ನೀವು ಎಲ್ಲಾ ವಿಷಯ ತಿಳ್ಕೊಂಡು ತೀರ್ಮಾನಕ್ಕೆ ಬರಬೇಕು.”