ಪುಟ:Duurada Nakshhatra.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಹೂಂ.. ಸಾರ್....ನನಗಿಂತ ದೊಡ್ಡ ಹುಡುಗರನ್ನೇ ಮಾನಿಟರ್ ಮಾಡ್ಬೇಕು ಸಾರ್.”

ಜಯದೇವನಿಗೀಗ ವಿಷಯ ಸ್ಪಷ್ಟವಾಯಿತು. ವ್ಯಂಗ್ಯ ಚಿತ್ರ ಬರೆದ \ವರ ತಂಡ, ಈ ಹಿರೇಮಣಿಗಿಂತ ಹಿರಿಯದಾಗಿತ್ತೆನ್ನುವುದರಲ್ಲಿ ಸಂದೇಹ ವಿರಲಿಲ್ಲ.

“ನಿನ್ನ ಮಾತು ಯಾರೂ ಕೇಳೊಲ್ವೆ ಶ್ರೀನಿವಾಸಮೂರ್ತಿ?

“ಇಲ್ಲ ಸಾರ್.”

'ಹು೦, ಆಗಲಿ, ಆ ಮೇಲೆ ನೋಡೋಣ.”

ಪಾಠವೇನೋ ನಡೆಯಿತು. ಆದರೆ ಜಯದೇವನಿಂದ ಮನಸ್ಸಿಟ್ಟು ಪಾಠ ಹೇಳುವುದಾಗಲಿಲ್ಲ, ವಿದ್ಯಾರ್ಥಿಗಳೂ ನೆಟ್ಟ ಮನಸ್ಸಿನಿಂದ ಕಿವಿ ಗೊಡಲಿಲ್ಲ.

ಆ ತರಗತಿ ಮುಗಿಸಿಕೊಂಡು ದುಗುಡ ತುಂಬಿದ ಹೃದಯದಿಂದಲೆ ಜಯದೇವ ಆಫೀಸು ಕೊಠಡಿಗೆ ಬಂದ.

“ಮೂರನೇ ತರಗತೀದ್ದು ಏನಾದ್ರು ಮಾಡ್ಬೇಕು ಸಾರ್” ಎಂದ ಆತ ಮುಖ್ಯೋಪಾಧ್ಯಾಯರೊಡನೆ.

“ಏನು ಸಮಾಚಾರ ?

“ಆ ಮಾನಿಟರ್ ವಿಷಯ. ಹುಡುಗ ಅಳ್ತಾನೆ, ದೊಡ್ಡ ಹುಡುಗರು ಅವನ ಮಾತು ಕೇಳೋಲ್ವಂತೆ”

“ನನಗೆ ಗೊತ್ತಿತ್ತು...ಏನ್ಮಾಡೋಣ, ಹೇಳಿ?”

ರಂಗರಾಯರ ಅಸಹಾಯತೆಯ ಸ್ವರದಿಂದ ಜಯದೇವನಿಗೆ ಆಶ್ಚರ್ಯವಾಯಿತು.

“ಯಾಕ್ಸಾರ್?ಗಲಾಟೆ ಮಾಡೋ ಹುಡುಗರು ಯಾರೂಂತ ನೋಡಿ.”

'ಆ ತಂಡದ ಮುಖ್ಯಸ್ಥ ದೊಡ್ಡ ಹುಡುಗ ಯಾರು ಗೊತ್ತೆ? ನಮ್ಮ ಪೋಲಿಸ್ ಅಧಿಕಾರಿಯ ಮಗ. ನಿಮಗೆ ಇಲ್ಲಿಂದ ವರ್ಗವಾಗ್ವೇಕೂಂತ ಅಪೇಕ್ಷೆ ಇದ್ದರೆ ಧಾರಾಳವಾಗಿ ಆ ಹುಡುಗನ ತಂಟೆಗೆ ಹೋಗಿ, ನನ್ನ ಕೇಳಿದರೆ, ಸುಮ್ನಿದ್ಬಿಡೋದೇ ಮೇಲು.”

ಜಯದೇವ ಬೆರಗಾಗಿ ತೆರೆದ ಬಾಯಿ-ಕಣ್ಣು ಕ್ಷಣಕಾಲ ಹಾಗೆಯೇ ಇದ್ದುವು.