ಪುಟ:Duurada Nakshhatra.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಮಾತು ಪೂರ್ತಿಯಾಗುತ್ತಲಿದ್ದಂತೆ ರಂಗರಾಯರು ಹೊರಹೋದರು.

"ನಾನು ಹೇಳಿದ್ದು ಸರಿಯಲ್ಲ ಅಂತೀರಾ?" ಎಂದು ನಂಜುಂಡಯ್ಯ ಜಯದೇವನನ್ನೆ ದಿಟ್ಟಿಸುತ್ತಾ ಅಂದರು.

ಜಯದೇವ ಅಲ್ಲವೆನ್ನುವ ಹಾಗಿರಲಿಲ್ಲ. ಹಾಗೆ ಹೇಳಲು, ವಾದಿಸಲು ಆತ ಇಷ್ಟಪಡಲಿಲ್ಲ. ಆ ಅನುಭವದ ಮೇಲೆ ತೆರೆಯನ್ನು ಇಳಿಬಿಟ್ಟು ಬೇರೇನನ್ನಾದರೂ ಯೋಚಿಸಲು ಆತ ಯತ್ನಿಸಿದ.

............

ಶಾಲೆಯಲ್ಲಿ ವಸತಿ...ಹೋಟಲಿನಲ್ಲಿ ಊಟ.

ನಾಲ್ಕನೆಯ ತರಗತಿಯಿದ್ದ ಕೊಠಡಿಯಲ್ಲಿ ಎರಡು ಬೆಂಚುಗಳನ್ನು ಜೋಡಿಸಿ, ಹಾಸಿಗೆ ಹಾಸಿ, ಕಿಟಕಿ ತೆರೆದಿಟ್ಟು, ಆ ರಾತ್ರೆ ಜಯದೇವ ಮಲಗಿದ. ಹೊರಗಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿ ಆಹ್ಲಾದಕರವಾಗಿತ್ತು. ಜಗತ್ತು ನಿದ್ದೆಹೋಗತೊಡಗಿದ್ದಾಗ ಆ ಪ್ರಶಾಂತತೆಯಲ್ಲಿ ಗರಿಗೆದರಿಕೊಂಡು ನೆನಪಿನ ಹಕ್ಕಿಗಳು ದೂರದೂರಕ್ಕೆ ಸಂಚಾರ ಮಾಡಿದುವು.

...ತಾನೇ ವಿದ್ಯಾಭ್ಯಾಸ ಕಲಿತ ಕಾನಕಾನಹಳ್ಳಿಯ ಶಾಲೆ. ಅಲ್ಲಿ ಉಪಾಧ್ಯಾಯರ ಮೆಚ್ಚುಗೆಗೆ ತಾನು ಪಾತ್ರಾನಾದುದು. ಆ ಬಳಿಕ ಬೆಂಗಳೂರು. ಅಲ್ಲಿ ತಾನು ಅಡುಗೆಯವನಾಗಿದ್ದ ಮನೆಯಲ್ಲಿ ಓದಲು ದೀಪವಿಲ್ಲದೆ ಪಟ್ಟ ಸಂಕಟಗಳು...

ಹೊಸತಾಗಿ ಕೊಂಡು ತಂದಿದ್ದ ಬೆಡ್ ಲ್ಯಾಂಪಿನತ್ತ ಕೈಚಾಚಿ ಜಯದೇವ ಬತ್ತಿಯನ್ನು ಕಿರಿದು-ಬಲು ಕಿರಿದುಗೊಳಿಸಿದ.... ಇದು ತನ್ನದೇ ಆದ ದೀಪ. ಈ ತಿಂಗಳಾದ ಬಳಿಕ ದೊರೆಯುವ ನಾಲ್ವತ್ತು ರೂಪಾಯಿ ಸಂಬಳದ ನಿರೀಕ್ಷೆಯಿಂದ ಕೊಂಡುತಂದ ದೀಪ...ಕಿರಿದುಗೊಳಿಸಿದ್ದ ದೀಪವನ್ನು ಸುಮ್ಮನೆ ಜಯದೇವ ಒಮ್ಮೆಲೆ ದೊಡ್ಡದು ಮಾಡಿದ-ಸಣ್ಣದು ದೊಡ್ಡದು-ಮತ್ತೆ ಸಣ್ಣದು...

ಅದೊಂದು ಸಂಜೆ ವೇಣುವಿನ ಬರಿವಿಕೆಯನ್ನು ಇದಿರುನೋಡುತ್ತ ಆತನ ಕೊಠಡಿಯಲ್ಲಿ ಏನನ್ನೊ ಓದುತ್ತ ಜಯದೇವ ಕುಳಿತಿದ್ದ. ಅದು, ಅದೇ ಆಗ ಹೊಸತಾಗಿ ಬಂದಿದ್ದ ಕನ್ನಡ ಕಾದಂಬರಿ. ಬಲು ಸೊಗಸಾಗಿತ್ತು. ಓದುವುದರಲ್ಲೆ ತಲ್ಲೀನನಾಗಿದ್ದ ಜಯದೇವನಿಗೆ ಕತ್ತಲಾದುದು, ದೃಷ್ಟಿ