ಪುಟ:Duurada Nakshhatra.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಸುಕಾದುದು, ಗೊತ್ತಾಗಲೇ ಇಲ್ಲ. ಒಮ್ಮೆಲೆ ದೀಪ ಹತ್ತಿಕೊಂದಿತು. ಸುನಂದಾ ವಿದ್ಯುತ್ ಗುಂಡಿಯ ಬಳಿ ನಿಂತಿದ್ದಳು. ಜಯದೇವ ತಲೆಯತ್ತಿ ಆಕೆಯನ್ನು ನೋಡಿ ಮುಗುಳ್ನಕ್ಕ.

"ಥ್ಯಾಂಕ್ಸ್."

ಮತ್ತೆ ಓದುವುದರಲ್ಲೇ ಆತ ತಲ್ಲೀನನಾದ.

ಟಿಕ್-ದೀಪ ಆರಿತು. ತಲೆಯೆತ್ತಿ ನೋಡಿದ ಜಯದೇವ.

"ಯಾಕೆ ಸುನಂದಾ ?"

ಟಿಕ್-ದೀಪಹತ್ತಿಕೊಂಡಿತು. ಕುಲುಕುಲು ನಗುತ್ತಿದ್ದಳು ಸುನಂದಾ, ತುಂಟ ಹುಡುಗಿಯಹಾಗೆ. ಎಣ್ಣೆಯ ದೀಪವಾಗಿದ್ದರೆ ಮೆಲ್ಲನೆ ಸಣ್ಣದು ದೊಡ್ಡದು ಮಾಡುತ್ತಿದ್ದಳೇನೊ!...

"ಎಷ್ಟೊತ್ತು ಓದೋದು ಜಯಣ್ಣ? ಬೇಜಾರು ನಂಗೆ. ಏನಾದರೂ ಮಾತಾಡ್ಬಾರ್ದಾ?"

"ಈ ಕಾದಂಬರಿ ಚೆನ್ನಗಿದೆ ಅಲ್ವಾ?"

"ನಾನು ಓದಲ್ಲ ಅದರ ಕತೆ ಹೇಳು...ಓದಿದಷ್ಟು ಹೇಳು. ಪ್ಲೀಸ್-"

ಜಯದೇವ ಕತೆ ಹೇಳಲಿಲ್ಲ. ಸುನಂದಾ ಪುಸ್ತಕ ಓದಿಲ್ಲವೆಂದರೆ ಯಾರು ನಂಬುತಿದ್ದರು? ಮನೆಗೆ ಯಾವ ಪುಸ್ತಕ ಬಂದರೂ ಮೊದಲು ಓದುವವಳು ಆಕೆಯೇ.

...ನಿದ್ದೆ ಹೋಗುವ ಹೊತ್ತಿಗೆ ಕತೆ. ಈ ರೀತಿ ಯಾರೂ ಜಯದೇವನಿಗೆ ಕತೆ ಹೇಳಿರಲಿಲ್ಲ. ಅಜ್ಜಿಯ ಬಾಯಿಂದ ರಾಜಕುಮಾರ ರಾಜಕುಮಾರಿಯ ಕತೆ ಕೇಳುವ ಭಾಗ್ಯವಿರಲಿಲ್ಲ ಆತನಿಗೆ...ಆದರೂ ಅತ ಪುಸ್ತಕಗಳನ್ನು ಓದುತ್ತಿದ್ದ-ಕೈಗೆ ಸಿಕ್ಕಿದ್ದನ್ನೆಲ್ಲ.

ಆದರೆ, ಸುನಂದಾ ಜತೆಯಲ್ಲಿ ಆತ ಸರಿಜೋಡಿಯಾಗುವನೋ ಇಲ್ಲವೋ. ಆಕೆ ಎಷ್ಟೊಂದು ಓದಿದ್ದಳು-ಎಷ್ಟೊಂದು!

ಸುನಂದ---ಸುಂದರಿ...

ಪಕ್ಕಕ್ಕೆ ಹೊರಳಿ, ಕಣ್ಣುಮುಚ್ಚಿ ಕಣ್ಣುತೆರೆದು, ನಿದ್ದೆ ಹೋಗಲು ಯತ್ನಿಸಿದ ಜಯದೇವ. ಯಾರನ್ನೋ-ಯಾರನ್ನು?-ಸ್ಮರಿಸಿ ತುಟಿಗಳು ಮುಗುಳ್ನಗುತ್ತಲೇ ಇದ್ದುವು...ಹಾರಿ ಹೋಗಿದ್ದ ಹಕ್ಕಿಗಳೆಲ್ಲ ಸದ್ದಿಲ್ಲದೆ ಸಾಲಾಗಿ ಬಂದು ಮತ್ತೆ ನೆನಪಿನ ಗೂಡು ಸೇರಿಕೊಂಡವು.