ಪುಟ:Duurada Nakshhatra.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿದ್ದೆ ಮೋಹಿನಿಯಾಗಿ ಬಲೆಬೀಸಿ ಜಯದೇವನನ್ನು ಬಿಗಿದು ಕಟ್ಟಿದಳು.

...................

ಮಾರನೆಯ ದಿನ ಜಯದೇವ, ಮೂರನೆಯ ತರಗತಿಯಲ್ಲಿ, ತನಗೊಪ್ಪಿಗೆ ಯಾಗದೇ ಇದ್ದರೂ ಅನಿವಾರ್ಯವೆಂದು, ಶ್ರೀನಿವಾಸಮೂರ್ತಿಯ ಬದಲು ರಘುನಾಥನನ್ನು ಹಿರೇಮಣಿಯಾಗಿ ನೇಮಿಸಿದ. ಎಷ್ಟೋ ಜನ ಹುಡುಗರಿಗೆ ಇದು ಒಪ್ಪಿಗೆಯಾಗದೇ ಹೋದರೂ ಯಾರೂ ವಿರೋಧಿಸಲಿಲ್ಲ.

ಮುಖ್ಯೋಪಾಧ್ಯಾಯರ ಸೂಚನೆಯಂತೆ ನಾಲ್ಕನೆಯ ತರಗತಿಗೂ ಜಯದೇವನೇ ಕನ್ನಡ ಪಾಠ ಹೇಳಿದ. ಅದೇನೂ ಆತನಿಗೆ ಕಷ್ಟದ್ದಾಗಿ ತೋರಲಿಲ್ಲ. ಪಠ್ಯ ಪುಸ್ತಕದಲ್ಲಿ ಯಾವುದೇ ಪಾಠ ನೀರಸವಾಗಿದ್ದರೂ, ಜಯದೇವ ಅದನ್ನೆತ್ತಿಕೊಂಡು ಯೋಚಿಸುತ್ತ ತನ್ನ ಬುದ್ಧಿಮತ್ತೆಯ ಒರೆಗಲ್ಲಿಗೆ ತೀಡಿದಾಗ, ಆ ಪಾಠದಲ್ಲೂ ಸ್ವಾರಸ್ಯ ಕಂಡುಬರುತ್ತಿತ್ತು. ಕೊನೆಯ ತರಗತಿಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಹದಿನೆಂಟು. ಅವರಲ್ಲಿ ಹಿಂದಿನವರ್ಷ ಉತ್ತೀರ್ಣರಾಗದೆ ಉಳಿದವರೂ ಕೆಲವರಿದ್ದರು. ಆ ಹುಡುಗ ಹುಡುಗಿಯರಿಗೆಲ್ಲ ಶಾಲೆಗೆ ಹೋಗುವುದು ದಿನನಿತ್ಯದ ಅನಿವಾರ್ಯ ಸಂಕಟವೇನೂ ಆಗಿರಲಿಲ್ಲ. ಹುಡುಗತನದ ಮೆರಗು ಇದ್ದರೂ ಅವರಲ್ಲೊಂದು ರೀತಿಯ ಜವಾಬ್ದಾರಿಯಿತ್ತು. ಎಷ್ಟೆಂದರೂ ಐದೈದು ರೂಪಾಯಿನ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದವರು ! ಆ ಬಳಗದಲ್ಲಿ ಹಲವರಿಗೆ ಪಾಠಗಳಲ್ಲಿ ಒಳ್ಳೆಯ ಆಸಕ್ತಿಯಿತ್ತು. ಪುಸ್ತಕದಲ್ಲಿದ್ದುದಕ್ಕಿಂತಲೂ ಹೆಚ್ಚನ್ನು ತಿಳಿದುಕೊಳ್ಳಲು ಅವರು ಯತ್ನಿಸುತ್ತಿದ್ದರು.

ಒಂದುದಿನ ಪಾಠಹೆಳಲೆಂದು "ಆದರ್ಷ ಮಹಿಳಾ ರತ್ನಗಳು" ಪುಸ್ತಕವನ್ನೆತ್ತಿಕೊಂಡಾಗ, ಹೇಗೆ ಮುಂದುವರಿಯಬೇಕೆಂಬುದು ಸ್ಪಷ್ಟವಾಗದೆ, ಜಯದೇವ ನಾಲ್ಕು ನಿಮಿಷ ಪುಸ್ತಕದ ಪುಟಗಳನ್ನು ತಿರುವುತ್ತ ಕುಳಿತ.... ವೀರಮಾತೆ ವಿಮಲಾ, ದೇವಿ ಜೋನ್, ಜೀಜಾಬಾಯಿ, ಫ್ಲಾರೆನ್ಸ, ನೈಟಿಂಗೇಲ್, ಕಸ್ತೂರಿ ಬಾ, ಒಬ್ಬರೇ ಇಬ್ಬರೇ? ಪುಸ್ತಕದಲ್ಲಿ ಕೆಲವು ಭಾವ ಚಿತ್ರಗಳಿದ್ದುವು. ಆದರೆ ಬರಿಯ ಭಾವಚಿತ್ರಗಳಿಂದಲೇ ದಿವ್ಯಜೀವಗಳ ಪೂರ್ಣದರ್ಶನ ಸಾಧ್ಯವಿತ್ತೆ? ಅಲ್ಲಿ ಅಚ್ಚಾಗಿದ್ದ ಜೀವನ ಚರಿತ್ರೆಗಳೂ ಅಷ್ಟೇ. ಬಿಳಿಯ ಹಾಳೆಯಮೇಲೆ ಕರಿಯ ಅಕ್ಷರಗಳು ಅಚ್ಚೊತ್ತಿಕೊಂಡು