ಪುಟ:Duurada Nakshhatra.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಲಿಸದೆ ಅಲ್ಲೆ ನಿಂತಿದ್ದುವು. ಜಯದೇವ ಚಲಿಸುವ ವ್ಯಕ್ತಿಗಳನ್ನು ಬಯಸಿದ. ಆಳಿದವರನ್ನು ಜೀವಂತಗೊಳಿಸಲೆತ್ನಿಸಿದ... ಮೆಲ್ಲ ಮೆಲ್ಲನೆ ಪುಸ್ತಕದ ಪುಟಗಳಿಂದ ಆ ವೀರಮಾತೆಯರೆದ್ದು ಜಯದೇವನ ಕಣ್ಣೆದುರು ನಿಂತರು. ಅವರನ್ನು ಕಾಣುತ್ತ ಜಯದೇವ ಮುಗುಳ್ನಕ್ಕ. ಅದು ದಿವ್ಯದರ್ಶನ...ತಾನು ಕಂಡುದನ್ನು ಹಾಗೆಯೇ ವಿದ್ಯಾರ್ಥಿಗಳಿಗೂ ತಿಳಿಸಿಕೊಡುವ ಬಯಕೆ ಅವನಿಗಾಯಿತು.

'ಈ ಯತ್ನದಲ್ಲಿ ಯಶ ದೊರೆಯಲಿ, ನನಗೆ ಯಶ ದೊರೆಯಲಿ' ಎಂದು ಮನಸ್ಸಿನಲ್ಲೆ ಆತ ಧ್ಯಾನಿಸಿಕೊಂಡ.

"ಷುರು ಮಾಡೋಣವೋ ಪಾಠ?"

ಇಷ್ಟರ ತನಕ ಉಪಾಧ್ಯಾಯರೇಕೆ ಮೌನವಾಗಿದ್ದರೆಂಬುದನ್ನೆ ತಿಳಿಯದಿದ್ದ ಹುಡುಗರಲ್ಲಿ ಹಲವರೆಂದರು:

"ಹೂಂ ಸಾರ್."

"ಮೊದಲ್ನೆ ಪಾಠ ನಾನು ಓದ್ಲೇ ಸಾರ್?" ಎಂದನೊಬ್ಬ ಹುಡುಗ, ಹಾಗೆ ಓದಿ ಅಭ್ಯಾಸವಿದ್ದವನು.

"ಬೇಡ. ಇವತ್ತು ಮೊದಲನೇ ಪಾಠ ಷುರು ಮಾಡೋಕ್ಮುಂಚೆ ಕೆಲವು ವಿಷಯಗಳ್ನ ಹೇಳ್ತೀನಿ. ನಾನು ಮಾತಾಡ್ತಾ ಹೋದ ಹಾಗೆ ಟಿಪ್ಪಣಿ ಮಾಡೊಕೆ ಬರುತ್ತೊ ?"

ಅಂತಹ ಅಭ್ಯಾಸವಿರಲಿಲ್ಲ ಹುಡುಗರಿಗೆ. ತಾನು ಕಲಿಸುವ ಪದ್ಧತಿ ಈ ಮಟ್ಟಕ್ಕೆ ಹೇಳಿದ್ದಲ್ಲವೆನಿಸಿತು ಜಯದೇವನಿಗೆ. ಕ್ಷಣಾರ್ಧದಲ್ಲೆ ಹೇಳಲು ಅಪೇಕ್ಷಿಸಿದ್ದ ವಿಷಯಗಳನ್ನೆಲ್ಲ ಮರೆಯಾಗಿ, ಹೊಸ ಸರಳರೀತಿಯಲ್ಲಿ ಆ ವಿಷಯಗಳೇ ಮತ್ತೆ ರೂಪುಗೊಂಡವು.

"ಪರವಾಗಿಲ್ಲ, ನಾನು ಹೇಳೋದನ್ನ ಮನಸ್ಸು ಕೊಟ್ಟು ಕೇಳಿ."

ಕುಳಿತಲ್ಲಿಂದೆದ್ದು ನಿಲ್ಲುತ್ತಾ ಜಯದೇವ ತನ್ನ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಗಮನಿಸಿದ. ಕೇಳಲು ತವಕಗೊಂಡು ಆತುರ ವ್ಯಕ್ತಪಡಿಸುತ್ತ ಅವನನ್ನೆ ಎಷ್ಟೊಂದು ಕಣ್ಣುಗಳು ದಿಟ್ಟಿಸುತ್ತಿದ್ದುವು! ಆ ದೃಷ್ಟಿಗಳಿಂದೆಲ್ಲ ಸ್ಫೂರ್ತಿ ಪಡೆಯುತ್ತ ಜಯದೇವ ಆರಂಭಿಸಿದ...

ಅದೊಂದು ಸೊಗಸಾದ ಕಥನ ಭಾಷಣ. "ಆದರ್ಶಮಹಿಳಾರತ್ನಗಳು" ಪುಸ್ತಕಕ್ಕೆ ಮುನ್ನುಡಿ. ಆತನ ಮಾತುಗಳು, ಜಗತ್ತಿನ ಮಾತೆಯರೆಲ್ಲರ