ಪುಟ:Duurada Nakshhatra.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರೀತಿ ಗೌರವಗಳನ್ನೂ ಸೂರೆಗೊಂಡು ಜಯದೇವ ತರಗತಿಯಿಂದ ಹೊರಹೋದ.

ನಾಲ್ಕನೆಯ ತರಗತಿಯಲ್ಲಿ ಯಾವ ಪಾಠ ಮಾಡಿದರೆಂದು ರಂಗರಾಯರು ಕೇಳಲಿಲ್ಲ. ಪಾಠ ನಡೆಯುತಿದ್ದಾಗ ಅವರು ಒಂದೆರಡು ಸಾರೆ ಜಗಲಿಯಲ್ಲಿ ಅತ್ತಿಂದತ್ತ ಹಾದು ಹೋಗಿದ್ದರು. ಅದರ್ಶ ಮಹಿಳೆಯರನ್ನು ಕುರಿತು ಮಾತನಾಡುವುದರಲ್ಲೆ ತಲ್ಲೀನನಾಗಿದ್ದ ಜಯದೇವನಿಗೆ ಅದು ಗೋಚರವಾಗಿರಲಿಲ್ಲ. ಹುಡುಗರು ಸೂತ್ರದ ಬೊಂಬೆಯ ಹಾಗೆ ಕುಳಿತು ಜಯದೇವನ ಮಾತುಗಳಿಗೆ ಕಿವಿ ಕೊಡುತ್ತಿದ್ದುದನ್ನು ಕಂಡು ರಂಗರಾಯರಿಗೆ ಸಮಾಧಾನವೆನಿಸಿತ್ತು. ಜಯದೇವನ ದಕ್ಷತೆಯ ಬಗೆಗೆ ಅವರಿಗೆ ಸಂದೇಹವಿರಲಿಲ್ಲ. ಆತ ಯಶಸ್ವಿಯಾದ ಉಪಾಧ್ಯಾಯನಾಗುವುದು ಖಂಡಿತವಾಗಿತ್ತು.

ನಂಜುಂಡಯ್ಯ ಆ ಪ್ರಶ್ನೆ ಕೆಳಿದರು. ಯುವಕ ಜಯದೇವ ಸಮರ್ಥನಾದ ಉಪಾಧ್ಯಾಯನಾಗುವನೆಂಬ ವಿಷಯದಲ್ಲಿ ಅವರಿಗೂ ಸಂಶಯವಿರಲಿಲ್ಲ. ಆದರೆ ಯಾವ ಪಾಠ ಮಾಡಿದಿರೆಂದು ಕೇಳುವುದು ತಮ್ಮ ಕರ್ತವ್ಯವೆಂದು ಅವರು ಭಾವಿಸಿದರು. ತೀರ ಹೊಸಬನಾದ ಉಪಾಧ್ಯಾಯ ಬಂದಿರುವಾಗ ಹಳಬರಾದವರು ಅವನ ನೆರವಿಗೆ ಬರುವುದು ಕರ್ತವ್ಯವಲ್ಲದೆ ಇನ್ನೇನು ?

ಮುಖ್ಯೋಪಾಧ್ಯಾಯರೇ ಸ್ವತಃ ಏನೂ ಕೆಳದೆ ಇದ್ದುದನ್ನು ಕಂಡು ನಂಜುಂಡಯ್ಯ ಸ್ವಲ್ಪಹೊತ್ತು ಸುಮ್ಮನಿರಬೇಕಾಯಿತು. ಇಬ್ಬರೇ ಉಳಿದಾಗ ಅವರೆಂದರು:

"ನಾಲ್ಕನೆಯ ತರಗತಿ ಹುಡುಗರು ಹೇಗಿದಾರೆ?"

"ಮೂರನೇ ತರಗತಿಗಿಂತ ಎಷ್ಟೋ ವಾಸಿ. ಜವಾಬ್ದಾರಿ ಇರೋ ಹುಡುಗರು."

"ಹೋದ ವರ್ಷ ಸರಿಯಾಗಿ ತೀಡಿದ್ದೆ ಅವರ್ನ."

ನಾಲ್ಕನೆಯ ತರಗತಿ ಹುಡುಗರು ಒಳ್ಳೆಯವರಾಗಿ ತೋರಿದರೆ ಅದಕ್ಕೆ ಕಾರಣ ತಾನು--ಎಂಬ ಅಂತರಾರ್ಥವಿತ್ತು ನಂಜುಂಡಯ್ಯನ ಮಾತಿನಲ್ಲಿ.

"ತುಂಬಾ ಆಸಕ್ತಿಯಿಂದ ಕಿವಿಗೊಟ್ಟು ಕೂತರು."

ಆದರೆ ನಂಜುಂದಯ್ಯನ ಅನುಭವ ಹಾಗಿರಲಿಲ್ಲ. ಅವರು ಪಾಠವನ್ನು-ಅದರಲ್ಲೂ ಇಂಗ್ಲಿಷ್ ಪಾಠವನ್ನು -ಚೆನ್ನಾಗಿಯೇ ಮಾಡುತಿದ್ದರೂ