ಪುಟ:Duurada Nakshhatra.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯವರೆಗೂ ಪ್ರಯೋಗ ಮಾಡಲು ಹೊರಟ ರಂಗರಾಯರು ಆಮೇಲೆ ಆ ಊರಲ್ಲಿದ್ದುದು ಎರಡು ತಿಂಗಳ ಕಾಲ ಮಾತ್ರ.

ಆ ಅವಧಿಯಲ್ಲಿ ಸಾಕು ಸಾಕೆನಿಸುವಷ್ಟು ಮಳೆ ಸುರಿಯಿತು. ಆ ಪುಟ್ಟ ಊರಿನ ರಸ್ತೆಗಳು ನದಿಗಳಾದುವು, ಮರದ ಕೊಂಬೆಯೊಂದು ಗಾಳಿಗೆ ಮುರಿದು ಶಾಲೆಯ ಛಾವಣಿಯ ಮೂಲೆಗೆ ಬಿದ್ದು ಕೆಲವು ಹೆಂಚುಗಳು ಒಡೆದು ಚೂರಾದುವು. ಸುತ್ತುಮುತ್ತಲಿನ ಪ್ರದೇಶವೆಲ್ಲ ಜಲಮಯವಾಯಿತು

ಆಗ ಶಾಲೆಯಲ್ಲಿ ಪಾಠವಾಗುತ್ತಿರಲಿಲ್ಲವೆಂದರೂ ಸರಿಯೆ. ತರಗತಿಗಳಿಗೆ ಬರುತಿದ್ದ ಹುಡುಗರಿಗಿಂತಲೂ ಬರದೇ ಇದ್ದವರ ಸಂಖ್ಯೆಯೇ ಹೆಚ್ಚು. ಅದಕ್ಕೆ ಹಲವು ಕಾರಣಗಳಿದುವು. ಹಳ್ಳಿಗಳಿಂದ ನಡೆದು ಬರುತಿದ್ದ ಹುಡುಗರು ಆ ಮಳೆಯಲ್ಲಿ ಸುರಕ್ಷಿತವಾಗಿ ಹಿಂತಿರುಗುವರೆಂಬ ಭರವಸೆ ಇರಲಿಲ್ಲ, ಅದಕ್ಕಿಂತಲೂ ಹೆಚ್ಚಾಗಿ ಎಷ್ಟೋ ವಿದ್ಯಾರ್ಥಿಗಳು ತಮ್ಮ ಹಿರಿಯರಿಗೆ ಕೃಷಿ ಕೆಲಸದಲ್ಲಿ ಮನೆಗೆಲಸದಲ್ಲಿ ನೆರವಾಗಬೇಕಾಗುತಿತ್ತು. ಛತ್ರಿ ಹಿಡಿದು ಶಾಲೆಗೆ ಬರುತ್ತಿದ್ದವರ ಸಂಖ್ಯೆ ಎಷ್ಟೊಂದು ಕಡಮೆ ! ಕೆಲವು ದಿನ ಬಿಟ್ಟು ಆ ಮೇಲೆ ಬಂದವರನ್ನು ಗದರಿಸುವುದು ಅವಶ್ಯವಾಗಿತ್ತು. ಆದರೆ ಹಾಗೆ ಗದರಿಸುವುದು ತನ್ನಿಂದಂತೂ ಆಗದ ಕೆಲಸವೆಂದು ಜಯದೇವ ಮನಗಂಡ.

ಅಂತಹ ಒಂದು ಮಳೆ ಮಧ್ಯಾಹ್ನ, ನಡು ಎತ್ತರದ, ವಯಸ್ಸಾಗಿದ್ದರೂ ಹೃಷ್ಟಪುಷ್ಟರಾಗಿದ್ದ, ಒಬ್ಬರು ಹಾಸಿಗೆ ಟ್ರಿಂಕುಗಳೊಡನೆ ಬಂದಿಳಿದರು. ಆ ಮುಖದ ಮೇಲೆ ನಗುವಿರಲಿಲ್ಲ, ಆ ಕಣ್ಣುಗಳಲ್ಲಾದರೋ ಸಂಶಯ ಮನೆಮಾಡಿತ್ತು, ಮಾತು, ಆಡಿದರೆ ಮುತ್ತು ಸುರಿಯುವುದೇನೋ ಎನ್ನುವ ಹಾಗೆ-'ಹಾಂ' 'ಹೂಂ' 'ಐ ಸೀ.' -

ಆತ ಬಂದಿಳಿದಾಗ, ಹೊಸ, ಇನ್ಸ್ ಪೆಕ್ಟರಿರಬಹುದೇನೋ-ಎಂದು ರಂಗರಾಯರು ಕೂಡಿಸಿ ಕಳೆದರು. ನಂಜುಂಡಯ್ಯ, ಶಂಕರಪ್ಪನ ಅರ್ಜಿಯ ವಿಚಾರಣೆಗೆ ಯಾರಾದರೂ ಬಂಧಿರಬಹುದೆ–ಎಂದು ಯೋಚಿಸಿದರು.